ಹೈಕೋರ್ಟ್
ಬೆಂಗಳೂರು: ವಿದ್ಯುತ್ ಸ್ಮಾರ್ಟ್ ಮೀಟರ್ ಕಡ್ಡಾಯ ಅಳವಡಿಕೆಗೆ ಸಂಬಂಧಿಸಿದಂತೆ ಬೆಸ್ಕಾಂ ಹೊರಡಿಸಿರುವ ಮಾರ್ಗಸೂಚಿ ಜಾರಿಗೆ ಹೈಕೋರ್ಟ್ ತಡೆ ನೀಡಿದೆ.
ಈ ಸಂಬಂಧ ದೊಡ್ಡಬಳ್ಳಾಪುರದ ಪಿ.ಎಂ.ಹರೀಶ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಈ ಆದೇಶ ಕೇವಲ ಅರ್ಜಿದಾರರಿಗೆ ಮಾತ್ರವೇ ಅನ್ವಯವಾಗುತ್ತದೆ’ ಎಂದು ಸ್ಪಷ್ಟಪಡಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗಾರ್, ‘ಸ್ಮಾರ್ಟ್ ಮೀಟರ್ ಅಳಡಿಕೆಯನ್ನು ಕಡ್ಡಾಯ ಮಾಡಿರುವುದರಿಂದ ಸಾರ್ವಜನಿಕರಿಗೆ ಭಾರಿ ಹೊರೆಯಾಗಲಿದೆ’ ಎಂದು ವಾದ ಮಂಡಿಸಿದರು.
ಕೆಲಕಾಲ ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರಿಗೆ ಸೀಮಿತವಾಗಿ ಬೆಸ್ಕಾಂ ಮಾರ್ಗಸೂಚಿ ಮತ್ತು ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿರುವುದಕ್ಕೆ ತಡೆ ನೀಡಿ, ವಿಚಾರಣೆಯನ್ನು ಜೂನ್ 6ಕ್ಕೆ ಮುಂದೂಡಿತು.
ಕೋರಿಕೆ ಏನು?: ‘ಬೆಸ್ಕಾಂ 2025ರ ಫೆಬ್ರುವರಿ 13ರಂದು ಹೊರಡಿಸಿರುವ ಮಾರ್ಗಸೂಚಿ ಅನುಸಾರ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ ಮಾಡಿರುವುದನ್ನು ವಜಾಗೊಳಿಸಬೇಕು ಮತ್ತು ಗ್ರಾಹಕರೇ ಸ್ಮಾರ್ಟ್ ಮೀಟರ್ ಅಥವಾ ಎಲೆಕ್ಟ್ರೋಸ್ಟ್ಯಾಟಿಕ್ ಎನರ್ಜಿ ಮೀಟರ್ ಅಳವಡಿಸಿಕೊಳ್ಳಲು ಅನುಮತಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.