ADVERTISEMENT

ವಕೀಲರ ಎನ್‌ಒಸಿ ಕಡ್ಡಾಯ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 20:06 IST
Last Updated 13 ಫೆಬ್ರುವರಿ 2019, 20:06 IST
   

ಬೆಂಗಳೂರು: ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವ ವ್ಯಾಜ್ಯಗಳಲ್ಲಿ ವಕಾಲತ್ತು ವಹಿಸಿದ ವಕೀಲರನ್ನು ಬದಲಾಯಿಸುವುದಕ್ಕೆ ನಿರಾಕ್ಷೇಪಣಾ ಪತ್ರ ಕಡ್ಡಾಯ (ಎನ್‌ಒಸಿ) ಎಂದು ಹೈಕೋರ್ಟ್ ಆದೇಶಿಸಿದೆ.

ಸಿವಿಲ್ ವ್ಯಾಜ್ಯವೊಂದಕ್ಕೆ ಸಂಬಂಧಿಸಿದ ಆರ್‌ಎಫ್‌ಎ (ರೆಗ್ಯುಲರ್ ಫಸ್ಟ್ ಅಪೀಲು) ಪ್ರಕರಣವೊಂದರಲ್ಲಿ ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶ ನೀಡಿದೆ.

ಮೈಸೂರಿನ ಭಾಗ್ಯ ಮತ್ತು ಜಯಲಕ್ಷ್ಮಿ ನಡುವಿನ ವ್ಯಾಜ್ಯದಲ್ಲಿ, ಭಾಗ್ಯ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಭಾಗ್ಯ ಅವರ ಪರವಾಗಿ ಪಿ.ಪ್ರಸನ್ನಕುಮಾರ್‌ ವಕಾಲತ್ತು ವಹಿಸಿದ್ದರು. ಬುಧವಾರ ಅರ್ಜಿದಾರರು ಮತ್ತು ಪ್ರತಿವಾದಿಗಳು, ‘ನಾವು ಪರಸ್ಪರ ರಾಜಿಯಾಗಿದ್ದೇವೆ, ಪ್ರಕರಣ ಹಿಂಪಡೆಯುತ್ತೇವೆ’ ಎಂದು ನ್ಯಾಯಪೀಠಕ್ಕೆ ಜ್ಞಾಪನಾ ಪತ್ರ ಸಲ್ಲಿಸಿದರು.

ADVERTISEMENT

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರಸನ್ನಕುಮಾರ್, ‘ವಕಾಲತ್ತು ವಹಿಸಿರುವ ವಕೀಲರು ಪ್ರಕರಣದಲ್ಲಿ ಎನ್‌ಒಸಿ ನೀಡದ ಹೊರತು ಅರ್ಜಿ ವಾಪಸು ಪಡೆಯಲು ಆಗದು’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂಬಂಧ ನಡೆದ ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಅರ್ಜಿದಾರರು ಪ್ರಕರಣವನ್ನು ಬೇರೊಬ್ಬರಿಗೆ ನೀಡುವಾಗ ಅಥವಾ ಅರ್ಜಿ ಹಿಂಪಡೆಯುವಾಗ ವಕಾಲತ್ತು ವಹಿಸಿದ ವಕೀಲರಿಂದ ಎನ್‌ಒಸಿ ಪಡೆಯುವುದು ಅಗತ್ಯ’ ಎಂದು ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.