ADVERTISEMENT

ದಟ್ಟಣೆ ಕಾರಿಡಾರ್‌ ಅಭಿವೃದ್ಧಿಗೆ ತಾತ್ವಿಕ ಅನುಮೋದನೆ

ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯಡಿ ಅನುದಾನ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 16:56 IST
Last Updated 14 ಜನವರಿ 2022, 16:56 IST

ಬೆಂಗಳೂರು: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ನಗರದ 12 ಅತಿ ದಟ್ಟಣೆ ಕಾರಿಡಾರ್‌ಗಳ ಅಭಿವೃದ್ಧಿ ಸೇರಿದಂತೆ ₹6 ಸಾವಿರ ಕೋಟಿ ಮೊತ್ತದ ಕಾಮಗಾರಿಗೆ ರಾಜ್ಯ ಸರ್ಕಾರ ಶುಕ್ರವಾರ ತಾತ್ವಿಕ ಅನುಮೋದನೆ ನೀಡಿದೆ.

ರಸ್ತೆ ಅಭಿವೃದ್ಧಿ, ಕೆಳ ಸೇತುವೆ (ಗ್ರೇಡ್ ಸಪರೇಟರ್‌), ಕೆರೆ ಅಭಿವೃದ್ಧಿ, ರಾಜಕಾಲುವೆ, ಉದ್ಯಾನ, ಘನತಾಜ್ಯ ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆ, 75 ಕೊಳಚೆ ಪ್ರದೇಶಗಳ ಅಭಿವೃದ್ಧಿ, ಆಸ್ಪತ್ರೆ ಮತ್ತು ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ₹6 ಸಾವಿರ ಕೋಟಿ ಅನುದಾನ ಒದಗಿಸುವ ಬಗ್ಗೆ 75ನೇ ಸ್ವಾತಂತ್ರೋತ್ಸವದಲ್ಲಿ ಮುಖ್ಯಮಂತ್ರಿ ಘೋಷಣೆ ಮಾಡಿದ್ದರು. 2022ರ ಜ. 6ರಂದು ಸಚಿವ ಸಂಪುಟದ ಅನುಮೋದನೆಯೂ ದೊರೆತಿತ್ತು.

‘ಮುಂದಿನ ಮೂರು ವರ್ಷಗಳಲ್ಲಿ ಈ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ರಾಜ್ಯ ಸರ್ಕಾರದಿಂದ ಶೇ 50ರಷ್ಟು ಅನುದಾನ ನೀಡಲಾಗುತ್ತದೆ. ಶೇ 40ರಷ್ಟನ್ನು ಕೆಯುಐಡಿಎಫ್‌ಸಿಯ ‘ಕರ್ನಾಟಕ ವಾಟರ್ ಆ್ಯಂಡ್‌ ಸ್ಯಾನಿಟೈಸೇಷನ್‌ ಪೂಲ್‌ಡ್ ಫಂಡ್‌ ಟ್ರಸ್ಟ್’ನಿಂದ ಸಾಲ ಪಡೆಯಬೇಕು. ಶೇ 10ರಷ್ಟನ್ನು ಬಿಬಿಎಂ‍ಪಿಯ ಸ್ವಂತ ಸಂಪನ್ಮೂಲದಿಂದ ಭರಿಸಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

‘ಕಾಮಗಾರಿ ಹಂಚಿಕೆ ಮತ್ತು ಕ್ರಿಯಾ ಯೋಜನೆಯನ್ನು ಆಡಳಿತ ಇಲಾಖೆಯ ವಿವೇಚನೆಗೆ ಒಳಪಟ್ಟು ಅಂತಿಮಗೊಳಿಸಲು ಅನುಮೋದನೆ ನೀಡಲಾಗಿದೆ. ₹10 ಕೋಟಿಗೂ ಕಡಿಮೆ ಇರದಂತೆ ಪ್ಯಾಕೇಜ್‌ ರೂಪಿಸಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ(ಕೆಟಿಪಿಪಿ) ಪ್ರಕಾರ ಟೆಂಡರ್ ಪ್ರಕ್ರಿಯೆ ನಡೆಸಬೇಕು’ ಎಂದು ಆದೇಶದಲ್ಲಿ ಷರತ್ತು ವಿಧಿಸಲಾಗಿದೆ.

ಸರ್ಕಾರ ಅಂತಿಮಗೊಳಿಸಿದ ಕಾಮಗಾರಿಯನ್ನು ಬದಲಾವಣೆ ಮಾಡಕೂಡದು. ಯಾವುದೇ ಕಾಮಗಾರಿ ಅಗತ್ಯ ಇಲ್ಲ ಎಂದು ಕಂಡು ಬಂದರೆ, ಆ ಮೊತ್ತವನ್ನು ಉಳಿತಾಯ ಎಂದು ಪರಿಗಣಿಸಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.