ADVERTISEMENT

ಅತಿ ದಟ್ಟಣೆ ಕಾರಿಡಾರ್‌ ಟೆಂಡರ್‌ಗೆ ಮರುಜೀವ? ಅನುಮೋದನೆಗೆ ಸಿದ್ಧತೆ

191 ಕಿ.ಮೀ ರಸ್ತೆ ಅಭಿವೃದ್ಧಿ, ನಿರ್ವಹಣೆಗೆ ₹1120.48 ಕೋಟಿ ವೆಚ್ಚ *

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 20:47 IST
Last Updated 30 ನವೆಂಬರ್ 2021, 20:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದ 12 ಅತಿ ದಟ್ಟಣೆಯ ಕಾರಿಡಾರ್‌ಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ₹1,120.48 ಕೋಟಿ ವೆಚ್ಚದ ಟೆಂಡರ್‌ ಪ್ರಕ್ರಿಯೆಗೆ ಅನುಮೋದನೆ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಒಟ್ಟು 191 ಕಿ.ಮೀ ಉದ್ದದ 12 ಅತಿ ದಟ್ಟಣೆ ಕಾರಿಡಾರ್‌ಗಳ ನಿರ್ವಹಣೆಯ ಹೊಣೆಯನ್ನು ಬಿಬಿಎಂಪಿಯ ಬದಲು ಕರ್ನಾಟಕ ರಸ್ತೆ ಅಭಿವೃದ್ಧಿ ಪ್ರಾಧಿಕಾರಕ್ಕೆ (ಕೆಆರ್‌ಡಿಸಿಎಲ್‌) ರಾಜ್ಯ ಸರ್ಕಾರ ವಹಿಸಿತ್ತು. ಈ ಕಾರಿಡಾರ್‌ಗಳ ಉನ್ನತೀಕರಣಕ್ಕೆ ಒಟ್ಟು ₹ 335.17 ಕೋಟಿ, ದೈನಂದಿನ ನಿರ್ವಹಣೆಗೆ ಮೊದಲ ವರ್ಷಕ್ಕೆ ₹ 142.12 ಕೋಟಿ, ಇನ್ನುಳಿದ ನಾಲ್ಕು ವರ್ಷಗಳ ನಿರ್ವಹಣೆಗೆ ₹ 643.19 ಕೋಟಿ ವೆಚ್ಚವಾಗುತ್ತದೆ ಎಂದು ಕೆಆರ್‌ಡಿಸಿಎಲ್‌ ಅಂದಾಜಿಸಿತ್ತು.ಈ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆ ಕುರಿತ ನಾಲ್ಕು ಪ್ಯಾಕೇಜ್‌ಗಳೂ ಸೇರಿ ಒಟ್ಟು ₹1,120.48 ಕೋಟಿ ವೆಚ್ಚದ ಟೆಂಡರ್‌ಗಳನ್ನು ಕೆಆರ್‌ಡಿಸಿಎಲ್‌ ಅಂತಿಮಗೊಳಿಸಿತ್ತು.

ಯಾವುದೇ ರಸ್ತೆ ಅಭಿವೃದ್ಧಿಪಡಿಸಿದರೂ ಅವುಗಳಿಗೆ ಎರಡು ವರ್ಷಗಳ ದೋಷ ಬಾಧ್ಯತಾ ಅವಧಿ ಇರುತ್ತದೆ. ಈ ಅವಧಿಯಲ್ಲಿ ಏನೇ ದೋಷ ಕಾಣಿಸಿಕೊಂಡರೂ ಗುತ್ತಿಗೆದಾರರೇ ಸರಿಪಡಿಸಬೇಕು. ಆದರೂ ರಸ್ತೆಗಳ ಅಭಿವೃದ್ಧಿಗೆ ₹ 335 ಕೋಟಿ ವ್ಯಯಿಸಿ, ಅವುಗಳ ನಿರ್ವಹಣೆಗೆ ಐದು ವರ್ಷಗಳಲ್ಲಿ ₹ 785 ಕೋಟಿ ವ್ಯಯ ಮಾಡುವ ಅಗತ್ಯವೇನು? ದೋಷ ಬಾಧ್ಯತಾ ಅವಧಿಯಲ್ಲೂ ನಿರ್ವಹಣೆಗೆ ₹ 291.35 ಕೋಟಿ ನೀಡುವ ಔಚಿತ್ಯವೇನು ಎಂಬ ಪ್ರಶ್ನೆ ಎದುರಾಗಿತ್ತು.

ADVERTISEMENT

ಅತಿ ದಟ್ಟಣೆ ಕಾರಿಡಾರ್‌ಗಳ ಅಭಿವೃದ್ಧಿ ಮತ್ತು ಟೆಂಡರ್‌ ಪ್ರಕ್ರಿಯೆಯ ಅಕ್ರಮಗಳ ಬಗ್ಗೆ ‘ಪ್ರಜಾವಾಣಿ’ಯು ಅನೇಕ ವಿಶೇಷ ವರದಿಗಳನ್ನು ಪ್ರಕಟಿಸಿ ಗಮನ ಸೆಳೆದಿತ್ತು. ಇವುಗಳ ಮೂಲಕ ವೈಟ್‌ಟಾಪಿಂಗ್‌ ಮಾಡಲಾದ ರಸ್ತೆಗೂ ನಿರ್ವಹಣೆ ವೆಚ್ಚವನ್ನು ತೋರಿಸಿ ಲೂಟಿ ಮಾಡಲು ಹೇಗೆ ಸಿದ್ಧತೆ ನಡೆದಿದೆ ಎಂಬುದನ್ನು ವಿಶ್ಲೇಷಿಸಲಾಗಿತ್ತು.

ಈ ಬಗ್ಗೆ ಟೀಕೆ ವ್ಯಕ್ತವಾದ ಬಳಿಕ ಆಗಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಟೆಂಡರ್‌ ಪ್ರಕ್ರಿಯೆಗೆ ಅನುಮೋದನೆ ನೀಡಿರಲಿಲ್ಲ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಬಿಬಿಎಂಪಿ ವ್ಯಾಪ್ತಿಯ ಮೂಲಸೌಕರ್ಯ ಮತ್ತು ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಆ.10ರಂದು ನಡೆಸಿದ್ದರು. ಅತಿ ದಟ್ಟಣೆ ಕಾರಿಡಾರ್‌ಗಳ ಅಭಿವೃದ್ಧಿ ಮತ್ತು ದೈನಂದಿನ ನಿರ್ವಹಣೆಗೆ ಸಂಬಂಧಿಸಿದಂತೆ ಕೆಆರ್‌ಡಿಸಿಎಲ್‌ ಆಹ್ವಾನಿಸಿದ್ದ 4 ಪ್ಯಾಕೇಜ್‌ಗಳಿಗೆ ಸಂಬಂಧಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಮಾತ್ರ ಅನುಮೋದನೆ ನೀಡಿದ್ದರು. ದೈನಂದಿನ ನಿರ್ವಹಣೆಗೆ ಮರುಟೆಂಡರ್‌ ಕರೆಯಬೇಕು. ಈ ಕುರಿತು ಆದೇಶ ಹೊರಡಿಸುವುದಕ್ಕೆ ಮುನ್ನ ಕಡತವನ್ನು ಪುನರ್‌ ಪರಾಮರ್ಶೆಗಾಗಿ ತಮ್ಮ ಮುಂದೆ ಮರುಮಂಡನೆ ಮಾಡುವಂತೆ ಮುಖ್ಯಮಂತ್ರಿ ಸೂಚಿಸಿದ್ದರು.

ಇದಾಗಿ ಮೂರೂವರೆ ತಿಂಗಳ ಬಳಿಕ ಈ ಟೆಂಡರ್‌ಗೆ ಅನುಮೋದನೆ ನೀಡುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿಯವರು ಈ ಕುರಿತ ಕಡತಗಳನ್ನು ಇತ್ತೀಚೆಗೆ ತರಿಸಿಕೊಂಡಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ಹೇಳಿವೆ.

ಕಾಮಗಾರಿಯ ನಾಲ್ಕು ಪ್ಯಾಕೇಜ್‌ಗಳ ವಿವರ

ಪ್ಯಾಕೇಜ್‌; ಅಂದಾಜು ಮೊತ್ತ (₹ ಕೋಟಿಗಳಲ್ಲಿ); ಟೆಂಡರ್‌ಗಿಟ್ಟ ಮೊತ್ತ (₹ ಕೋಟಿಗಳಲ್ಲಿ); ರಸ್ತೆ ಉದ್ದ (ಕಿ.ಮೀ); ವಾಸ್ತವದಲ್ಲಿ ಅಭಿವೃದ್ಧಿ (ಕಿ.ಮೀ); ಬಿಡ್‌ ಮೊತ್ತ; ಟೆಂಡರ್‌ ಪ್ರೀಮಿಯಂ (%)

1; 303.86; 241.62; 44.56; 17.87; 231.82; 8.02

2; 264.91; 184.14; 42.39; 27.00; 200.89; 9.097

3; 233.51; 159.68; 49.45; 1.15; 173.1; 8.40

4; 318.21; 229.30; 54.60; 21.86; 258.19; 8.02

ಒಟ್ಟು; 1120.49; 787.74; 190.99; 67.88; 864; –

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.