ADVERTISEMENT

ಹೈಟೆನ್ಷನ್‌ ವಯರ್‌ ಬಳಿ ಕೂತಿದ್ದ ಮುದ್ದಿನ ಗಿಳಿ ಉಳಿಸಲು ಹೋಗಿ ಪ್ರಾಣ ಕಳೆದುಕೊಂಡ!

ನಾಗಮಂಗಲದ ಅರುಣ್ ಕುಮಾರ್ (32) ಮೃತಪಟ್ಟವರು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 15:47 IST
Last Updated 12 ಡಿಸೆಂಬರ್ 2025, 15:47 IST
<div class="paragraphs"><p>ನಾಗಮಂಗಲದ ಅರುಣ್ ಕುಮಾರ್ (32) ಮೃತಪಟ್ಟವರು</p></div>

ನಾಗಮಂಗಲದ ಅರುಣ್ ಕುಮಾರ್ (32) ಮೃತಪಟ್ಟವರು

   

ಬೆಂಗಳೂರು: ಗಿರಿನಗರದ ಅಪಾರ್ಟ್‌ಮೆಂಟ್‌ ಬಳಿ ಹಾದು ಹೋಗಿರುವ ಹೈಟೆನ್ಷನ್ ವಿದ್ಯುತ್‌ ಮಾರ್ಗದ ಕಂಬದ ಮೇಲೆ ಕುಳಿತಿದ್ದ ಸುಮಾರು ₹2 ಲಕ್ಷ ಬೆಲೆ ಬಾಳುವ ವಿದೇಶಿ ತಳಿಯ ಗಿಳಿಯನ್ನು ರಕ್ಷಣೆ ಮಾಡಲು ಹೋದ ಯುವಕ, ವಿದ್ಯುತ್‌ ಆಘಾತದಿಂದ ಶುಕ್ರವಾರ ಮೃತಪಟ್ಟಿದ್ದಾರೆ.

ನಾಗಮಂಗಲದ ಅರುಣ್ ಕುಮಾರ್ (32) ಮೃತಪಟ್ಟವರು.

ADVERTISEMENT

ಗಿರಿನಗರದ ವೀರಭದ್ರನಗರದ ಸಂಬಂಧಿಕರ ಅಂಗಡಿಯೊಂದರಲ್ಲಿ ಅರುಣ್‌ ಕುಮಾರ್‌ ಕಳೆದ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಸಂಬಂಧಿ ಲಿಖಿತಾ ಅವರು ಅಪಾರ್ಟ್​ಮೆಂಟ್​ನಲ್ಲಿ ನೆಲಸಿದ್ದರು. ವಿದೇಶಿ ಗಿಳಿಯೊಂದನ್ನು ಲಿಖಿತಾ ಸಾಕಿದ್ದರು. ಅಪಾರ್ಟ್‌ಮೆಂಟ್‌ ಪಕ್ಕದಲ್ಲಿಯೇ ಗಿಳಿ ಆಗಾಗ ಹಾರಾಟ ನಡೆಸುತ್ತಿತ್ತು. ಅರುಣ್ ಕುಮಾರ್ ಅವರೂ ಆ ಗಿಳಿಯನ್ನು ಮುದ್ದಿನಿಂದ ನೋಡಿಕೊಳ್ಳುತ್ತಿದ್ದರು ಎಂದು ಮೂಲಗಳು ಹೇಳಿವೆ.

ಆಗಿದ್ದು ಏನು?

ಶುಕ್ರವಾರ ಬೆಳಿಗ್ಗೆ ಅಪಾರ್ಟ್‌ಮೆಂಟ್​​​ ಬಳಿ ಹಾದು ಹೋಗಿರುವ ಹೈಟೆನ್ಷನ್ ವಿದ್ಯುತ್‌ ಮಾರ್ಗದ ಕಂಬದ ಮೇಲೆ ಗಿಳಿ ಕುಳಿತಿತ್ತು. ಅದನ್ನು ಕಂಡ ಅರುಣ್​ ಕುಮಾರ್​ ಅವರು, ವಿದ್ಯುತ್‌ ಪ್ರವಹಿಸಿ ಗಿಳಿ ಮೃತಪಡಬಹುದು ಎಂಬ ಆತಂಕದಿಂದ ಅದರ ರಕ್ಷಣೆಗೆ ಮುಂದಾಗಿದ್ದರು. ಕಾಂಪೌಂಡ್ ಮೇಲೆ ನಿಂತು ಕಬ್ಬಿಣದ ಪೈಪ್​​ಗೆ ಕೋಲು ಸೇರಿಸಿ ಗಿಳಿಯನ್ನು ಅಲ್ಲಿಂದ ಓಡಿಸಲು ಯತ್ನಿಸಿದ್ದರು. ಆಗ ವಿದ್ಯುತ್ ವೈರ್ ತಾಗಿ ಕಾಂಪೌಂಡ್‌ನಿಂದ ಕೆಳಗೆ ಬಿದ್ದಿದ್ದರು. ವಿದ್ಯುತ್‌ ಆಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಗಿಳಿಯ ಪ್ರಾಣ ರಕ್ಷಣೆಗೆ ಮುಂದಾಗಿದ್ದ ಅರುಣ್‌ ಕುಮಾರ್‌ ಮೃತಪಟ್ಟಿದ್ದಾರೆ. ಗಿಳಿ ಯಾವುದೇ ಅಪಾಯವಿಲ್ಲದೇ ಬದುಕುಳಿದಿದೆ’ ಎಂದು ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಬೆಸ್ಕಾಂ ಮತ್ತು ಕೆಇಬಿ ಅಧಿಕಾರಿಗಳು, ಗಿರಿನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರತಿಭಟನೆ
ಅಪಾರ್ಟ್‌ಮೆಂಟ್ ಬಳಿಯೇ ಹೈಟೆನ್ಷನ್‌ ವೈರ್​ಗಳು ಇರುವುದು ಸುರಕ್ಷಿತವಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಹೈಟೆನ್ಷನ್ ವಿದ್ಯುತ್‌ ಮಾರ್ಗ ಇರುವನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದ್ದಾರೆ

ಪ್ರಕರಣ ದಾಖಲು: ಡಿಸಿಪಿ

‘ಕಬ್ಬಿಣದ ರಾಡು ಬಳಸಿ ಗಿಳಿಯ ಜೀವ ಉಳಿಸಲು ಯುವಕ ಯತ್ನಿಸಿದ್ದರು. ಆಗ ದುರ್ಘಟನೆ ನಡೆದಿದೆ ಎಂಬುದು ಗೊತ್ತಾಗಿದೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು (ಯುಡಿಆರ್​) ಪ್ರಕರಣ ದಾಖಲಾಗಿದೆ’ ಎಂದು ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಬಿ.ಎಸ್.ನೇಮಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.