ADVERTISEMENT

‘ಅನಂತು ವರ್ಸಸ್ ನುಸ್ರತ್’ ಚಿತ್ರತಂಡದ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 19:30 IST
Last Updated 26 ಮಾರ್ಚ್ 2019, 19:30 IST
   

ಬೆಂಗಳೂರು: ಹೈಕೋರ್ಟ್ ಆವರಣದಲ್ಲಿ ಅನುಮತಿ ಇಲ್ಲದೇ ಶೂಟಿಂಗ್ ನಡೆಸಿದ್ದ ಆರೋಪದಡಿ ‘ಅನಂತು ವರ್ಸಸ್ ನುಸ್ರತ್’ ಚಿತ್ರತಂಡದ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಸೋಮವಾರ ಎಫ್‌ಐಆರ್‌ ದಾಖಲಾಗಿದೆ.

‘ಚಿತ್ರತಂಡದ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ವಕೀಲ ಎನ್.ಪಿ. ಅಮೃತೇಶ್, ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್‌ ನೀಡಿರುವ ಆದೇಶದಂತೆ ಸೋಮವಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ವಿಧಾನಸೌಧ ಪೊಲೀಸರು ಹೇಳಿದರು.

‘ಚಿತ್ರ ನಿರ್ಮಾಣ ಮಾಡಿದ್ದ ಮಾಣಿಕ್ಯ ಪ್ರೊಡಕ್ಷನ್, ನಿರ್ದೇಶಕ ಸುಧೀರ್‌ ಶಾನುಭೋಗ್‌, ಭಾಗ್ಯಲಕ್ಷ್ಮಿ ಕೆಂಪೇಗೌಡ ಹಾಗೂ ವಕೀಲರ ಅಸೋಸಿಯೇಷನ್‌ ಅವರನ್ನು ಆರೋಪಿಯನ್ನಾಗಿ ಮಾಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್ ನಟಿಸಿರುವ ಚಿತ್ರದ ಫೋಟೊ ಶೂಟಿಂಗ್‌ ಅನ್ನು 2017ರ ಆಗಸ್ಟ್‌ 17ರಂದು ಹೈಕೋರ್ಟ್‌ನಲ್ಲಿ ನಡೆಸಲಾಗಿತ್ತು. ರಾಷ್ಟ್ರೀಯ ಚಿಹ್ನೆಗಳು ಹಾಗೂ ಹೆಸರುಗಳ ದುರ್ಬಳಕೆ ತಡೆ ಕಾಯ್ದೆ ಅನ್ವಯ ಸಂಸತ್, ಸುಪ್ರೀಂ ಕೋರ್ಟ್, ಹೈಕೋರ್ಟ್ ಸೇರಿದಂತೆ ಕೆಲವು ನಿರ್ಬಂಧಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ಚಿತ್ರೀಕರಣ ನಡೆಸುವಂತಿಲ್ಲ. ಆದರೂ ಭದ್ರತಾ ನಿಯಮ ಉಲ್ಲಂಘಿಸಿ ಚಿತ್ರೀಕರಣ ನಡೆಸಲಾಗಿದೆ’ ಎಂದುಅಮೃತೇಶ್ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.