ADVERTISEMENT

ವಿದ್ಯಾರ್ಥಿಗಳಿಗೆ ಹೊಲಿಸಿದ ಸಮವಸ್ತ್ರ ನೀಡಲು ಆದೇಶ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 20:16 IST
Last Updated 28 ಆಗಸ್ಟ್ 2019, 20:16 IST
   

ಬೆಂಗಳೂರು: ’ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ (2019-20) ಆರ್‌ಟಿಇ ಕಾಯ್ದೆ ವ್ಯಾಪ್ತಿಗೆ ಒಳಪಡುವ ಶಾಲಾ ಮಕ್ಕಳಿಗೆ ನಿಯಮದಂತೆ ಎರಡು ಜೊತೆ ಸಿದ್ಧಪಡಿಸಿದ ಸಮವಸ್ತ್ರ, ಒಂದು ಜೊತೆ ಶೂ ಹಾಗೂ ಎರಡು ಜೊತೆ ಸಾಕ್ಸ್ ಒದಗಿಸಲು ಮುಂದಿನ ಎರಡು ತಿಂಗಳಲ್ಲಿ ಕ್ರಮ ಕೈಗೊಳ್ಳಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ಕೊಪ್ಪಳ ಜಿಲ್ಲೆ ಕಿನ್ನಾಳ ಗ್ರಾಮದ ದೇವಪ್ಪ ಬಸಪ್ಪ ಹರಿಜನ ಅವರ ಪುತ್ರ ಎಂಟು ವರ್ಷದ ಮಂಜುನಾಥ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಲೇವಾರಿ ಮಾಡಿದೆ.

‘ಇದು ಕಾಯ್ದೆಯ ಉಲ್ಲಂಘನೆಯಷ್ಟೇ ಅಲ್ಲ. ಇದರಲ್ಲಿ ಶುಚಿತ್ವದ ಪ್ರಶ್ನೆಯೂ ಅಡಗಿದೆ. ಈ ವಿಷಯದಲ್ಲಿ ಸರ್ಕಾರ ತನ್ನ ಹೊಣೆಗಾರಿಕೆ ಅರಿತುಕೊಳ್ಳಬೇಕು. ಅರ್ಜಿದಾರ ವಿದ್ಯಾರ್ಥಿ, ಸಕಾಲಿಕ ಹಾಗೂ ಮಹತ್ವಪೂರ್ಣ ವಿಷಯ ಹೊತ್ತು ನ್ಯಾಯಕ್ಕಾಗಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಅವರ ಈ ಕಾಳಜಿ ಪ್ರಶಂಸನೀಯ’ ಎಂದೂ ನ್ಯಾಯಪೀಠ ಹೇಳಿದೆ.

ADVERTISEMENT

ಆಕ್ಷೇಪಣೆ ಏನಿತ್ತು?: ‘ಪರಿಶಿಷ್ಟ ಜಾತಿ (ಎಸ್‌.ಸಿ), ಪರಿಶಿಷ್ಟ ವರ್ಗ (ಎಸ್‌.ಟಿ) ಮತ್ತು ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌), ಕಡ್ಡಾಯ ಶಿಕ್ಷಣ ಕಾಯ್ದೆ (ಆರ್‌ಟಿಇ) ಅಡಿಯಲ್ಲಿ ಕಲಿಯುತ್ತಿರುವ ಪ್ರಾಥಮಿಕ ಹಂತದ ಶಾಲಾ ಮಕ್ಕಳಿಗೆ ನೀಡಲಾಗುವ ಎರಡು ಸೆಟ್‌ ಸಮವಸ್ತ್ರ ನೀಡಿಕೆಯಲ್ಲಿ ಒಂದು ಸೆಟ್‌ ಅನ್ನು ಹೊಲಿಯದೇ ಬಟ್ಟೆ ಮಾತ್ರ ನೀಡಲಾಗುತ್ತಿದೆ. ಈ ಮಕ್ಕಳಿಗೆ ಪ್ರತಿ ಶೈಕ್ಷಣಿಕ ವರ್ಷದಲ್ಲಿ ಎರಡು ಜೊತೆ ಹೊಲಿಸಿದ ಸಮವಸ್ತ್ರಗಳನ್ನು ವಿತರಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂಬುದು ಅರ್ಜಿದಾರರ ಕೋರಿಕೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.