ಬೆಂಗಳೂರು: ಸಿನಿಮಾ ಕ್ಷೇತ್ರಕ್ಕೆ ಪ್ರತಿಭಾವಂತ ತಂತ್ರಜ್ಞರನ್ನು ರೂಪಿಸಲು ಸರ್ ಎಂ. ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ್ದ ‘ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ’ಯನ್ನು ನಗರದ ಒಳಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದರು.
ನಟ ಶ್ರೀನಾಥ್ ನೇತೃತ್ವದಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ತಂಡ ನೀಡಿದ ಮನವಿಯನ್ನು ಸ್ವೀಕರಿಸಿದ ನಂತರ ಅವರು ಮಾತನಾಡಿದರು.
ಹೆಸರುಘಟ್ಟದಲ್ಲಿರುವ ಸಂಸ್ಥೆಗೆ ಭೇಟಿ ನೀಡಿ, ಪರಿಶೀಲಿಸಲಾಗುವುದು. ಮುಖ್ಯಮಂತ್ರಿ ಜತೆ ಚರ್ಚಿಸಿದ ನಂತರ ಕಂಠೀರವ ಸ್ಟುಡಿಯೊ ಆವರಣಕ್ಕೆ ಸ್ಥಳಾಂತರಿಸಲು ಕೋರಲಾಗುವುದು. ಸಿನಿಮಾಟೋಗ್ರಾಫಿ, ಸೌಂಡ್ ಎಂಜಿನಿಯರಿಂಗ್ ಸೇರಿದಂತೆ ಹೊಸ ಕೋರ್ಸ್, ಆಧುನಿಕ ತಂತ್ರಜ್ಞಾನ ಅಳವಡಿಸಲಾಗುವುದು ಎಂದು ಭರವಸೆ ನೀಡಿದರು.
1943ರಲ್ಲಿ ವಿಶ್ವೇಶ್ವರಯ್ಯ ಅವರು ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಸ್ಥಾಪಿಸಿದ್ದರು. ರಾಜ್ಯದಲ್ಲಿ ಚಿತ್ರೋದ್ಯಮ ನೆಲೆಯೂರುವ ಮೊದಲೇ ಚಲನಚಿತ್ರ ಮತ್ತು ಮಾಧ್ಯಮದ ಅಗತ್ಯಗಳನ್ನು ಮನಗಂಡು ಇದರಲ್ಲಿ ‘ಸಿನಿಮಾಟೋಗ್ರಫಿ, ಸೌಂಡ್ ರೆಕಾರ್ಡಿಂಗ್ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಪರಿಚಯಿಸಿದ್ದರು.
1996ರಲ್ಲಿ ಈ ಎರಡೂ ಕೋರ್ಸ್‌ಗಳಿಗಾಗಿಯೇ ಹೆಸರಘಟ್ಟದಲ್ಲಿ ‘ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ’ ಆರಂಭಿಸಲಾಗಿತ್ತು. ಬಹು ಬೇಡಿಕೆ ಹೊಂದಿದ್ದ ಸಂಸ್ಥೆಗೆ ಸೇರಲು ಹಲವು ದಶಕಗಳು ವಿದ್ಯಾರ್ಥಿಗಳ ನಡುವೆ ಪೈಪೋಟಿ ಇತ್ತು. ಈಗ ಮೂಲಸೌಕರ್ಯಗಳ ಕೊರತೆ, ದೂರದಲ್ಲಿರುವ ಕಾರಣ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ. ನಗರದ ಒಳಗೆ ಸ್ಥಳಾಂತರಿಸಲು ಶ್ರೀನಾಥ್ ಕೋರಿದ್ದಾರೆ. ಅವರ ಬೇಡಿಕೆ ಶೀಘ್ರ ಈಡೇರಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.