ಬೆಂಗಳೂರು: ಗಾಂಧಿನಗರದ ಖಾಸಗಿ ಹೋಟೆಲ್‌ನಲ್ಲಿ ರಾಜ್ಯ ಭಾಷಾ ಮಹಾ ಸಂಘ ಸೋಮವಾರ ಹಿಂದಿ ದಿವಸ್ ಆಚರಣೆ ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಸದಸ್ಯರು ಪ್ರತಿಭಟನೆ ನಡೆಸಿದರು.
ವೇದಿಕೆಯ ಕಾರ್ಯಕರ್ತೆಯರು ಹೋಟೆಲ್‌ಗೆ ನುಗ್ಗಿ, ಬ್ಯಾನರ್ ಹರಿದು, ಶೀಲ್ಡ್ ಹೊಡೆದು ಹಾಕಿ ಗಲಾಟೆ ಮಾಡಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಬಂದು ಪರಿಸ್ಥಿತಿಯನ್ನು ತಹಬದಿಗೆ ತಂದರು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಹಿಳಾ ಕಾರ್ಯಕರ್ತೆಯನ್ನು ವಶಕ್ಕೆ ಪಡೆದು, ಸಂಜೆ ಬಿಡುಗಡೆ ಮಾಡಿದರು.
‘ಕನ್ನಡದಲ್ಲಿ ಯಾರೂ ಮಾತನಾಡುತ್ತಿಲ್ಲ. ಹಿಂದಿಯನ್ನು ವೈಭವೀಕರಿಸುತ್ತಿದ್ದೀರಾ? ಈ ಕಾರ್ಯಕ್ರಮದಲ್ಲಿ ಕನ್ನಡದವರು ಯಾಕಿಲ್ಲ? ನಮಗೆ ನ್ಯಾಯ ಬೇಕು’ ಎಂದು ಕೂಗಾಡಿದ ಕಾರ್ಯಕರ್ತೆಯರು ಬ್ಯಾನರ್ ಹರಿದು ಹಾಕಿದರು.
ವೇದಿಕೆ ಮುಂಭಾಗ ಕುಳಿತು ಪ್ರತಿಭಟನೆ ಮಾಡುತಿದ್ದ ಮಹಿಳೆಯರನ್ನು ಹೊರಹಾಕಲು ಪೊಲೀಸ್ ಸಿಬ್ಬಂದಿ ಹರಸಾಹಸಪಟ್ಟರು.
ವೇದಿಕೆಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸಹನಾ ಶೇಖರ್, ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ ಮೋಹನ್ ಸೇರಿ ಹಲವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.