ADVERTISEMENT

ಹಿಂದಿ ಹೇರಿಕೆ ವಿರೋಧಿಸಿ ಪ್ರತಿಭಟನೆ: ಕರವೇ ಕಾರ್ಯಕರ್ತರ ಬಂಧನ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 23:30 IST
Last Updated 25 ಸೆಪ್ಟೆಂಬರ್ 2025, 23:30 IST
ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 
ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.    

ಬೆಂಗಳೂರು: ಕೇಂದ್ರ ಸರ್ಕಾರದ ಸಂಸದೀಯ ರಾಜಭಾಷಾ ಸಮಿತಿ ನಗರದ ಹೋಟೆಲ್‌ನಲ್ಲಿ ಮೂರು ದಿನಗಳಿಂದ ಕರ್ನಾಟಕ ಸೇರಿದಂತೆ ಹಿಂದಿಯೇತರ ರಾಜ್ಯಗಳ ಜನರ ಮೇಲೆ ಹಿಂದಿ ಹೇರಿಕೆ ಮಾಡುವ ಸಂಬಂಧ ನಡೆಸುತ್ತಿದ್ದ ಕಾರ್ಯಕ್ರಮದ ವಿರುದ್ಧ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದೆ.

ಈ ವೇಳೆ ಪೊಲೀಸರು ವೇದಿಕೆ ಮುಖಂಡರು, ಕಾರ್ಯಕರ್ತರನ್ನು ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು.

‘ಹಿಂದಿ ಹೇರಿಕೆಯ ಕಾರ್ಯಕ್ರಮ ಅಲ್ಲ, ಅದು ಹಿಂದಿ ಭಾಷೆಗೆ ಸಂಬಂಧಿಸಿದ್ದೇ ಅಲ್ಲ ಎಂದು ತಿರುಚಲಾಗುತ್ತಿದೆ. ಕೇಂದ್ರ ಸರ್ಕಾರದ ರಾಜಭಾಷಾ ಸಮಿತಿ ಇರುವುದೇ ಹಿಂದಿ ಪ್ರಚಾರಕ್ಕೆ ಮತ್ತು ಹಿಂದಿಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಹೇರುವುದಕ್ಕೆ. ಹಿಂದಿ ಸಾಮ್ರಾಜ್ಯಶಾಹಿಯನ್ನು ಸ್ಥಾಪಿಸುವುದಕ್ಕಾಗಿಯೇ ರಾಜಭಾಷಾ ಸಮಿತಿ ಕೆಲಸ ಮಾಡುತ್ತಿದೆ’ ಎಂದು ಕಾರ್ಯಕರ್ತರು ಆರೋಪಿಸಿದರು.

ADVERTISEMENT

‘ಭಾರತದಲ್ಲಿ ರಾಜಶಾಹಿ ವ್ಯವಸ್ಥೆ ಹೋಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾಗಿದೆ. ಆದರೆ, ರಾಜಭಾಷೆಯ ಹೆಸರಲ್ಲಿ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಯತ್ನ 1947ರಿಂದಲೂ ಜಾರಿಯಲ್ಲಿದೆ. ದೇಶದಲ್ಲಿ ಈಗ ರಾಜರೂ ಇಲ್ಲ, ರಾಜಭಾಷೆಗಳೂ ಇಲ್ಲ. ಇರುವುದು ಈ ನೆಲದ ಭಾಷೆಗಳು. ನಮಗೆ ನಮ್ಮ ಕನ್ನಡವೇ ರಾಷ್ಟ್ರಭಾಷೆ. ಇನ್ಯಾವುದೋ ಭಾಷೆಯನ್ನು ರಾಜಭಾಷೆ ಎಂದು ಹೇಳಿ ನಮ್ಮ ಮೇಲೆ ಹೇರಲು ಯತ್ನಿಸಿದರೆ ನಾವು ಸುಮ್ಮನಿರಲು ಸಾಧ್ಯವಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.