ಬೆಂಗಳೂರು: ‘ಚರಿತ್ರೆಗೆ ಪಕ್ಷ, ಜಾತಿ ರಾಜಕೀಯದ ಸೋಂಕು ತಗುಲಿದೆ. ಇದರಿಂದಾಗಿ ಚರಿತ್ರೆಯನ್ನು ಕಟಕಟೆಯಲ್ಲಿ ತಂದು ನಿಲ್ಲಿಸಲಾಗಿದ್ದು, ವಕಾಲತ್ತು ವಹಿಸುವವರು ಹೆಚ್ಚಾಗಿದ್ದಾರೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.
ಪ್ರೊ.ಎಸ್. ಚಂದ್ರಶೇಖರ್ ಅಭಿನಂದನಾ ಸಮಿತಿಯು ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್. ಚಂದ್ರಶೇಖರ್ ಅವರಿಗೆ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ‘ಚಂದ್ರಶಿಖರ’ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ, ಮಾತನಾಡಿದರು.
‘ಚರಿತ್ರೆಗೆ ಸಂಶೋಧನೆಯ ನಿಯತ್ತು, ವಿಶ್ಲೇಷಣೆಯ ವಿದ್ವತ್ತು ಅಗತ್ಯ. ಆದರೆ, ಇತ್ತೀಚೆಗೆ ಚರಿತ್ರೆಯ ಬಗ್ಗೆ ಯಾರು ಬೇಕಾದರೂ ಮಾತನಾಡಬಹುದು ಎಂಬಂತಾಗಿದೆ. ಜಾತಿ, ಧರ್ಮದ ಸೋಂಕಿನಿಂದಾಗಿ ಎರಡೂ ಪಂಥದವರು ಚರಿತ್ರೆ ತಿರುಚಲಾಗಿದೆ ಎನ್ನುತ್ತಿದ್ದಾರೆ. ಚರಿತ್ರೆ ಬಿಟ್ಟಿ ಬಿದ್ದಿದ್ದೇಯೆ ಅನಿಸುತ್ತಿದೆ. ಪಕ್ಷ ರಾಜಕಾರಣದಿಂದ ನೋಡುತ್ತಿರುವ ಪರಿಣಾಮ ಚರಿತ್ರೆಯ ನೈಜತೆ ನಾಶವಾಗುತ್ತಿದ್ದು, ಗೊಂದಲ ಸೃಷ್ಟಿಯಾಗುತ್ತಿದೆ. ಇನ್ನೂ ಕೆಲ ಸಂದರ್ಭದಲ್ಲಿ ಚರಿತ್ರೆಯನ್ನು ಪುರಾಣ, ಪುರಾಣವನ್ನು ಚರಿತ್ರೆಯನ್ನಾಗಿ ನೋಡಲಾಗುತ್ತಿದೆ’ ಎಂದು ಹೇಳಿದರು.
‘ಪುರಾಣ ಶಾಸ್ತ್ರಗಳು ಮತ್ತು ಪುರಾಣ ಕಾವ್ಯಗಳು ಬೇರೆ. ಪುರಾಣ ಕಾವ್ಯವನ್ನು ಏಕಾಏಕಿ ನಿರಾಕರಿಸುವ ಹುಸಿ ಕ್ರಾಂತಿಕಾರಿಗಳೂ ಇದ್ದಾರೆ. ಪುರಾಣ ಕಾವ್ಯಗಳು ಸಾಮಾಜಿಕ, ಸಾಂಸ್ಕೃತಿಕ ಇತಿಹಾಸ ಕಟ್ಟಿಕೊಡುತ್ತಿವೆ. ಈ ಸಂದರ್ಭದಲ್ಲಿ ಸರಿಯಾಗಿ ಆಲೋಚನೆ ಮಾಡುವ ಇತಿಹಾಸಕಾರರ ಅಗತ್ಯತೆ ಹೆಚ್ಚಿದೆ. ಚಂದ್ರಶೇಖರ್ ಅವರು ಅಂತರ್ ಶಿಸ್ತೀಯ ಅಧ್ಯಯನ ಮಾಡಿ ಕೃತಿಗಳನ್ನು ರಚಿಸಿದ್ದರು. ಆದ್ದರಿಂದ ಅವರು ರಚಿಸಿದ ಕೃತಿಗಳು ಚರಿತ್ರೆಯ ದೃಷ್ಟಿಯಿಂದ ಮುಖ್ಯ’ ಎಂದು ಅಭಿಪ್ರಾಯಪಟ್ಟರು.
ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ‘ಚಂದ್ರಶೇಖರ್ ಅವರು ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯದ ಬಗ್ಗೆ ಆಸಕ್ತಿ ಹೊಂದಿದ್ದರು. ಆದರೆ, ರಾಜಕಾರಣದಿಂದ ಬಿಡಿಸಿಕೊಂಡು, ಶೈಕ್ಷಣಿಕ ಕ್ಷೇತ್ರದಲ್ಲಿ ಬದ್ಧತೆಯಿಂದ ತಮ್ಮನ್ನು ತೊಡಗಿಸಿಕೊಂಡರು. ಪರಿಣಾಮ, ಈ ಕ್ಷೇತ್ರದಲ್ಲಿ ಅಸಾಧಾರಣ ಯಶಸ್ಸು ಕಂಡರು. ‘ಗಾಂಧಿ ಮತ್ತು ಅಂಬೇಡ್ಕರ್ ಒಂದೇ ಹಾದಿಯ ಪಯಣಿಗರು’ ಎಂಬ ಅವರ ಲೇಖನ ಹೊಸ ಚರ್ಚೆಗೆ ನಾಂದಿಯಾಗಿ, ಮುಂದೆ ಮಹತ್ತರ ಬದಲಾವಣೆಗೆ ಕಾರಣವಾಯಿತು’ ಎಂದು ಸ್ಮರಿಸಿಕೊಂಡರು.
ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ‘ಚಂದ್ರಶೇಖರ್ ಅವರು ವಿಶ್ವವಿದ್ಯಾಲಯದ ಕುಲಪತಿಯಾಗುವ ಅರ್ಹತೆ ಹೊಂದಿದ್ದರು. ಆದರೆ, ಅವರಿಗೆ ಆ ಅವಕಾಶ ದೊರೆಯಲಿಲ್ಲ. ಇತ್ತೀಚೆಗೆ ರಾಜಕೀಯ ಮತ್ತು ಜಾತಿ ಲಾಬಿಗೆ ಈ ಹುದ್ದೆ ಒಲಿಯುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಅಭಿನಂದನಾ ನುಡಿಗಳನ್ನಾಡಿದ ಭಾಷಾ ವಿದ್ವಾಂಸ ಕೆ.ವಿ. ನಾರಾಯಣ, ಚಂದ್ರಶೇಖರ್ ಅವರ ಜತೆಗಿನ ಒಡನಾಟಗಳನ್ನು ಸ್ಮರಿಸಿಕೊಂಡರು.
ಸಾಹಿತಿಗಳಿಗೆ ಅಂತರ್ ಶಿಸ್ತೀಯ ತಿಳಿವಳಿಕೆ ಇರಬೇಕು. ರಾಜ್ಯಶಾಸ್ತ್ರ ಇತಿಹಾಸ ಸೇರಿ ವಿವಿಧ ವಿಷಯಗಳ ಬಗ್ಗೆ ಅಧ್ಯಯನ ಶಿಸ್ತು ಹೊಂದಬೇಕುಬರಗೂರು ರಾಮಚಂದ್ರಪ್ಪ ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.