ADVERTISEMENT

ವಾಹನದ ಕೀ ಕಿತ್ತುಕೊಳ್ಳುವ ಅಧಿಕಾರವಿದೆಯಾ: ಗೃಹ ಸಚಿವರಿಗೆ ಮಕ್ಕಳ ಪ್ರಶ್ನೆ

* ಗೃಹ ಸಚಿವರ ಜೊತೆ ಮಕ್ಕಳ ಸಂವಾದ * ಪೊಲೀಸರ ವರ್ತನೆಗೆ ಬೇಸರ ವ್ಯಕ್ತಪಡಿಸಿದ ಚಿಣ್ಣರು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 17:14 IST
Last Updated 7 ಅಕ್ಟೋಬರ್ 2021, 17:14 IST
ಸಂವಾದದಲ್ಲಿ ಪಾಲ್ಗೊಂಡಿದ್ದ ಮಕ್ಕಳನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿಸಿದರು – ಪ್ರಜಾವಾಣಿ ಚಿತ್ರ
ಸಂವಾದದಲ್ಲಿ ಪಾಲ್ಗೊಂಡಿದ್ದ ಮಕ್ಕಳನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ನಡುರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಕೀ ಕಿತ್ತುಕೊಳ್ಳುವ ಅಧಿಕಾರ ಪೊಲೀಸರಿಗೆ ಇದೆಯಾ ? ಜನಸಾಮಾನ್ಯರ ದಿನದ ದುಡಿಮೆಗಿಂತಲೂ ನಿಯಮ ಉಲ್ಲಂಘನೆ ದಂಡ ಹೆಚ್ಚಿರುವುದು ಏಕೆ ? ಮಕ್ಕಳು ವಾಹನ ಚಲಾಯಿಸಿದರೆ ಏನು ಶಿಕ್ಷೆ ?... ಇವು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮಕ್ಕಳು ಕೇಳಿದ ಪ್ರಶ್ನೆಗಳು.

ನಗರದ ಸೇಂಟ್‌ ಮಾರ್ಕ್ಸ್ ರಸ್ತೆಯ ಎಸ್‌ಬಿಐ ವೃತ್ತದ ಉದ್ಯಾನದಲ್ಲಿ ಸಂಚಾರ ಪೊಲೀಸರು ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಕ್ಕಳು, ತಮ್ಮ ಪ್ರಶ್ನೆಗಳಿಗೆ ಗೃಹ ಸಚಿವರಿಂದ ಉತ್ತರ ಪಡೆದುಕೊಂಡರು.

ಸಂಚಾರ ನಿಯಮಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಫ್ರೆಂಜರ್‌ಟೌನ್‌ ಸರ್ಕಾರಿ ಶಾಲೆ ಸೇರಿದಂತೆ ನಗರ ನಾಲ್ಕು ಶಾಲೆಗಳ 30ಕ್ಕೂ ಹೆಚ್ಚು ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ADVERTISEMENT

ಬಾಲಕನೊಬ್ಬ, ‘ದಟ್ಟಣೆ ಇರುವ ರಸ್ತೆಯಲ್ಲಿ ವಾಹನಗಳನ್ನು ಏಕಾಏಕಿ ಪೊಲೀಸರು ಅಡ್ಡಗಟ್ಟುತ್ತಾರೆ. ಒತ್ತಾಯದಿಂದ ಕೀ ಕಸಿದುಕೊಂಡು ಇಟ್ಟುಕೊಳ್ಳುತ್ತಾರೆ. ಅವರಿಗೆ ಈ ಅಧಿಕಾರ ಇದೆಯಾ’ ಎಂದು ಪ್ರಶ್ನಿಸಿದ.

ಆರಗ ಜ್ಞಾನೇಂದ್ರ, ‘ಪ್ರತಿಯೊಬ್ಬ ಪೊಲೀಸರು ಜನರ ಸುರಕ್ಷತೆಗಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನೀವು ಹೆಚ್ಚು ಗೌರವ ನೀಡಬೇಕು. ಕಣ್ಣಿಗೆ ಕಾಣುವ ನಿಯಮ ಉಲ್ಲಂಘನೆಯಾದರೆ ಮಾತ್ರ ವಾಹನ ತಡೆಯುವಂತೆ ಪೊಲೀಸರಿಗೆ ಹೇಳಲಾಗಿದೆ. ಆಕಸ್ಮಾತ್ ಯಾರಾದರೂ ಕರ್ತವ್ಯಲೋಪ ಎಸಗಿದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಬಾಲಕಿಯೊಬ್ಬಳು, ‘ಹೆಲ್ಮೆಟ್‌ ಧರಿಸದೇ ವಾಹನ ಚಲಾಯಿಸಿದರೆ ₹ 500 ದಂಡ ಹಾಕುತ್ತಾರೆ. ಜನಸಾಮಾನ್ಯರ ದಿನದ ದುಡಿಮೆಗಿಂತಲೂ ದಂಡದ ಮೊತ್ತ ಏಕೆ ಹೆಚ್ಚಿದೆ’ ಎಂದು ಪ್ರಶ್ನಿಸಿದಳು.

ಆರಗ ಜ್ಞಾನೇಂದ್ರ, ‘ದಂಡ ಸಂಗ್ರಹ ಮಾಡುವುದು ಸರ್ಕಾರದ ಉದ್ದೇಶವಲ್ಲ. ಎಲ್ಲರೂ ನಿಯಮ ಪಾಲಿಸಿದರೆ, ದಂಡ ಪಾವತಿಸುವ ಸಂದರ್ಭವೇ ಬರುವುದಿಲ್ಲ’ ಎಂದರು.

‘ತಂದೆ–ತಾಯಿ ಊರಿಗೆ ಹೋದಾಗ, ಅವರ ದ್ವಿಚಕ್ರ ವಾಹನಗಳನ್ನು ನಾವೇ ಚಲಾಯಿಸುತ್ತೇವೆ’ ಎಂದು ಕೆಲ ಮಕ್ಕಳು ಹೇಳಿದರು.

ತಿಳಿಹೇಳಿದ ಗೃಹ ಸಚಿವ, ‘ಕಾನೂನು ಪ್ರಕಾರ 18 ವರ್ಷದ ಒಳಗಿನವರು ಚಾಲನೆ ಮಾಡುವಂತಿಲ್ಲ. ಆಕಸ್ಮಾತ್, ಚಾಲನೆ ಮಾಡಿ ಸಿಕ್ಕಿಬಿದ್ದರೆ ನಿಮ್ಮ (ಮಕ್ಕಳ) ಜೊತೆಯಲ್ಲಿ ಪೋಷಕರ ವಿರುದ್ಧವೂ ಪ್ರಕರಣ ದಾಖಲಾಗುತ್ತದೆ. ಹೀಗಾಗಿ, ಮಕ್ಕಳು ಚಾಲನೆ ಮಾಡಬಾರದು’ ಎಂದರು.

ನಗರಕ್ಕಷ್ಟೇ ಒತ್ತು ಏಕೆ?: ಬಾಲಕನೊಬ್ಬ, ‘ಭಾರತ ಹಳ್ಳಿಗಳ ದೇಶ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ನಗರವನ್ನಷ್ಟೇ ಅಭಿವೃದ್ಧಿ ಮಾಡುತ್ತಿದ್ದಾರೆ. ಹಳ್ಳಿಗಳ ಅಭಿವೃದ್ಧಿಗೆ ಒತ್ತು ನೀಡುತ್ತಿಲ್ಲ ಏಕೆ’ ಎಂದು ಪ್ರಶ್ನಿಸಿದ.

ಆರಗ ಜ್ಞಾನೇಂದ್ರ, ‘ಹಳ್ಳಿಗಳಲ್ಲಿ ಆರಂಭದಲ್ಲಿ ಶಾಲೆಗಳು ಇರಲಿಲ್ಲ. ಈಗ ಶಾಲೆಗಳು ಆಗಿವೆ. ದಿನದಿಂದ ದಿನಕ್ಕೆ ಹಳ್ಳಿಯೂ ಅಭಿವೃದ್ಧಿ ಆಗುತ್ತಿದೆ. ಅದರ ನಡುವೆಯೇ ಆರ್ಥಿಕತೆಗೆ ಹೆಚ್ಚು ಕೊಡುಗೆ ನೀಡುವ ನಗರವನ್ನೂ ಅಭಿವೃದ್ಧಿ ಮಾಡಲಾಗುತ್ತಿದೆ. ಎರಡರ ನಡುವೆ ಯಾವುದೇ ತಾರತಮ್ಯವಿಲ್ಲ’ ಎಂದರು.

ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್, ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಹಾಗೂ ಪೂರ್ವ ವಿಭಾಗದ (ಸಂಚಾರ) ಡಿಸಿಪಿ ಕೆ.ಎಂ. ಶಾಂತರಾಜು ಕಾರ್ಯಕ್ರಮದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.