ಜಿ. ಪರಮೇಶ್ವರ
ಬೆಂಗಳೂರು: ರಾಜ್ಯದ ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೋಮುಹಿಂಸೆ ನಿಗ್ರಹಿಸಲು ರಚಿಸಿರುವ ವಿಶೇಷ ಕಾರ್ಯಪಡೆಯನ್ನು (ಎಸ್‌ಎಎಫ್) ಮಂಡ್ಯ ಜಿಲ್ಲೆಗೂ ವಿಸ್ತರಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿ ಕೊಲೆ, ಕೋಮು ಗಲಭೆಯಿಂದಾಗಿ ಶಾಂತಿ ಇಲ್ಲದಂತಾಗಿತ್ತು. ವಿಶೇಷ ಕಾರ್ಯಪಡೆ ರಚನೆ ಬಳಿಕ ಕರಾವಳಿ ಭಾಗದಲ್ಲಿ ಕೊಲೆ, ಗಲಭೆಗಳು ಆಗಿಲ್ಲ. 300ಕ್ಕೂ ಹೆಚ್ಚು ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗಿದೆ. ಮೂರು ದಿನದ ಹಿಂದೆ ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ಸರ್ಕಾರದ ಕಾರ್ಯವೈಖರಿ ಬಗ್ಗೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಯಿತು ಎಂದು ಅವರು ತಿಳಿಸಿದರು.
ಸಿಐಡಿಯಲ್ಲಿ ಠೇವಣಿ ವಂಚನೆ ಮತ್ತು ಕ್ರಿಮಿನಲ್ ಗುಪ್ತಚರ ಘಟಕವನ್ನು ತೆರೆಯಲಾಗಿದೆ. ಬೆಳ್ತಂಗಡಿಯಲ್ಲಿ ಸಿಐಡಿ ಉಪ ವಿಭಾಗವನ್ನು ಸ್ಥಾಪನೆ ಮಾಡಲಾಗಿದೆ. ಅನೇಕ ಘಟನೆಗಳು ಮತ್ತು ಪ್ರಕರಣಗಳು ದಾಖಲಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಸಿಐಡಿ ಉಪವಿಭಾಗ ಸ್ಥಾಪಿಸಲಾಗಿದೆ ಎಂದು ವಿವರಿಸಿದರು.
‘ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪರಾಧ ಪ್ರಕರಣದ ತನಿಖೆ ಪೂರ್ಣಗೊಂಡಿಲ್ಲ. ಪ್ರಕರಣಕ್ಕೆ ಸಂಬಂಧಿಸಿದ ವರದಿಗಳನ್ನು ಮಾತ್ರ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ತನಿಖಾ ಹಂತದಲ್ಲಿರುವ ಪ್ರಕರಣದ ಬಗ್ಗೆ ಹೆಚ್ಚು ಚರ್ಚೆ ಮಾಡಲು ಆಗುವುದಿಲ್ಲ. ನಾನಾಗಲಿ, ಮುಖ್ಯಮಂತ್ರಿಯಾಗಲಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿಲ್ಲ’ ಎಂದು ಹೇಳಿದರು.
‘600 ಪಿಎಸ್‍ಐ ಹುದ್ದೆಗಳು ಖಾಲಿಯಿದ್ದು, ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು. 4,500 ಮಂದಿ ಪೊಲೀಸ್ ಕಾನ್‍ಸ್ಟೆಬಲ್‍ಗಳ ನೇಮಕಾತಿಗೆ ಹಣಕಾಸು ಇಲಾಖೆ ಅನುಮತಿ ನೀಡಿದೆ. ಒಳ ಮೀಸಲಾತಿ ಸಮಸ್ಯೆ ಬಗೆಹರಿದರೆ ಇಲಾಖೆಯಲ್ಲಿ 8 ಸಾವಿರ ಸಿಬ್ಬಂದಿ ನೇಮಕಾತಿಗೂ ಅಧಿಸೂಚನೆ ಹೊರಡಿಸಲಾಗುವುದು. ರಾಜ್ಯದ ವಿವಿಧ ಕಾರಾಗೃಹಗಳಲ್ಲಿನ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಕಮಾಂಡ್ ಸೆಂಟರ್ ತೆರೆಯಲಾಗುವುದು. ಮಂಗಳೂರಿನಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಹೊಸ ಕಾರಾಗೃಹ ನಿರ್ಮಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
‘ಕೋಲಾರ ಜಿಲ್ಲೆಯ ಕೆಜಿಎಫ್‍ನಲ್ಲಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆವತಿಯಲ್ಲಿ ಐಆರ್‌ಬಿ ಬೆಟಾಲಿಯನ್ ಆರಂಭಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.