ADVERTISEMENT

ಲಾಕ್‌ಡೌನ್; ಮಾಲೀಕರು ಮನೆಯಲ್ಲಿದ್ದಾಗಲೇ ಕಳವು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 16:23 IST
Last Updated 5 ಏಪ್ರಿಲ್ 2020, 16:23 IST

ಬೆಂಗಳೂರು: ಲಾಕ್‌ಡೌನ್ ಮಾಡಲಾಗಿದ್ದು ಸಂದರ್ಭದಲ್ಲೇ ಮುನೇನಕೊಳಲು ಬಳಿಯ ಮನೆಯೊಂದರಲ್ಲಿ ಮಾಲೀಕರು ಇರುವಾಗಲೇ ಕಳ್ಳತನ ನಡೆದಿದೆ.

‘ಏಪ್ರಿಲ್ 1ರಂದು ರಾತ್ರಿ 10 ಗಂಟೆಯಿಂದ ಮರುದಿನ ಬೆಳಿಗ್ಗೆ 5.30ರವರೆಗಿನ ಅವಧಿಯಲ್ಲಿ ಕಳ್ಳರು ಮನೆಗೆ ನುಗ್ಗಿ ₹1.50 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದಾರೆ’ ಎಂದು ಆರೋಪಿಸಿ ಪಿ.ರಾಮಕೃಷ್ಣ ರೆಡ್ಡಿ ಎಂಬುವರು ಮಾರತ್ತಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ದೂರಿನನ್ವಯ ಅಪರಿಚಿತರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ADVERTISEMENT

‘ರಾಮಕೃಷ್ಣ ರೆಡ್ಡಿ ಅವರು ಮುನೇಕೊಳಲು ಬಳಿಯ ಎನ್‌ಪಿಆರ್ ಲೇಔಟ್‌ ಮನೆಯಲ್ಲಿ ಸಂಸಾರ ಸಮೇತ ವಾಸವಿದ್ದಾರೆ. ಮನೆ ಮಂದಿ ಎಲ್ಲ ರಾತ್ರಿ ಮನೆಯಲ್ಲಿ ಮಲಗಿದ್ದಾಗಲೇ ಕಳ್ಳರು ಈ ಕೃತ್ಯ ಎಸಗಿ ಪರಾರಿಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಬೆಳಿಗ್ಗೆ ಎಚ್ಚರಗೊಂಡಿದ್ದ ರಾಮಕೃಷ್ಣ ರೆಡ್ಡಿ ಅವರು ಮನೆಯ ಬಾಲ್ಕನಿಯ ಕೊಠಡಿಗೆ ಹೋಗಿದ್ದರು. ಕೊಠಡಿಯ ಹಿಂದಿನ ಬಾಗಿಲು ತೆರೆದಿದ್ದು ಗಮನಿಸಿದ್ದರು. ಅನುಮಾನಗೊಂಡು ಕೊಠಡಿಯಲ್ಲಿದ್ದ ಬೀರು ಪರಿಶೀಲಿಸಿದಾಗಲೇ ಚಿನ್ನಾಭರಣ ಕಳವಾಗಿದ್ದು ಗೊತ್ತಾಗಿದೆ’ ಎಂದರು.

‘ಲಾಕ್‌ಡೌನ್‌ ಇರುವುದರಿಂದ ಮನೆಯವರೆಲ್ಲ ಇಡೀ ದಿನ ಮನೆಯಲ್ಲೇ ಇದ್ದರು. ಅವರು ಮಲಗಿದ್ದ ಬಳಿಕವೇ ಈ ಕೃತ್ಯ ನಡೆದಿದ್ದು, ಮನೆ ಬಗ್ಗೆ ಗೊತ್ತಿರುವವರೇ ಕಳ್ಳತನ ನಡೆಸಿರುವ ಅನುಮಾನ ಇದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.