ADVERTISEMENT

ಹನಿಟ್ರ್ಯಾಪ್| ಬಟ್ಟೆ ವ್ಯಾಪಾರಿಯಿಂದ ₹43 ಲಕ್ಷ ಸುಲಿಗೆ

ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವತಿ, ಸಂಬಂಧಿಕರ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 20:05 IST
Last Updated 28 ನವೆಂಬರ್ 2022, 20:05 IST
   

ಬೆಂಗಳೂರು: ನಗರ್ತಪೇಟೆಯ ಬಟ್ಟೆ ಅಂಗಡಿಯೊಂದರ ಮಾಲೀಕರನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ₹43 ಲಕ್ಷ ಸುಲಿಗೆ ಮಾಡಲಾಗಿದ್ದು, ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವತಿ ಸೇರಿ ಮೂವರ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘43 ವರ್ಷದ ಬಟ್ಟೆ ವ್ಯಾಪಾರಿ ದೂರು ನೀಡಿದ್ದಾರೆ. ಆರೋಪಿಗಳು ಎನ್ನಲಾದ 26 ವರ್ಷದ ಯುವತಿ, ಅವರ ಇಬ್ಬರು ಸಂಬಂಧಿಕರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹಲವು ವರ್ಷಗಳಿಂದ ಬಟ್ಟೆ ಅಂಗಡಿ ನಡೆಸುತ್ತಿರುವ ದೂರುದಾರ, 2020ರಲ್ಲಿ ಯುವತಿಯನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು. ಕೆಲ ತಿಂಗಳ ನಂತರ ಸಹೋದರನಿಗೆ ಅಪಘಾತವಾಗಿರುವುದಾಗಿ ಹೇಳಿದ್ದ ಯುವತಿ, ₹ 2 ಲಕ್ಷ ಸಾಲ ಪಡೆದಿದ್ದರು. ಹಲವು ತಿಂಗಳಾದರೂ ಹಣ ವಾಪಸು ಕೊಟ್ಟಿರಲಿಲ್ಲ. ಹಣ ನೀಡುವುದಾಗಿ ಹೇಳುತ್ತಲೇ ದೂರುದಾರರ ಜೊತೆ ಸಲುಗೆ ಬೆಳೆಸಿದ್ದ ಯುವತಿ, ಹಲವು ಬಾರಿ ಖಾಸಗಿ ಕ್ಷಣಗಳನ್ನು
ಕಳೆದಿದ್ದರು.’

ADVERTISEMENT

‘ಸಂಬಂಧಿಕರ ಜೊತೆ ಮಾತನಾಡಬೇಕೆಂದು ಹೇಳಿದ್ದ ಯುವತಿ, ದೂರುದಾರರನ್ನು ಕೆ.ಜಿ.ರಸ್ತೆಯಲ್ಲಿರುವ ಹೋಟೆಲೊಂದಕ್ಕೆ ಕರೆಸಿದ್ದರು. ಅದೇ ಸಂದರ್ಭದಲ್ಲೇ ಹೋಟೆಲ್‌ಗೆ ಬಂದಿದ್ದ ಸಂಬಂಧಿಕರಿಬ್ಬರು, ‘ಯುವತಿ ಜೊತೆ ಸಂಬಂಧ ಇಟ್ಟುಕೊಂಡಿದ್ದೀಯಾ. ಇದಕ್ಕೆ ಸಂಬಂಧಪಟ್ಟ ಪುರಾವೆಗಳು ನಮ್ಮ ಬಳಿ ಇವೆ. ಕೇಳಿದಷ್ಟು ಹಣ ಕೊಡದಿದ್ದರೆ ನಿಮ್ಮ ಮಾನ ಹರಾಜು ಹಾಕುತ್ತೇವೆ’ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದರು. ಇದರಿಂದ ಹೆದರಿದ್ದ ದೂರುದಾರ, ಹಂತ ಹಂತವಾಗಿ ₹ 43 ಲಕ್ಷ ನೀಡಿದ್ದರು’ ಎಂದು ಪೊಲೀಸ್ ಮೂಲಗಳು
ತಿಳಿಸಿವೆ.

‘ಆರೋಪಿಗಳು ಮತ್ತಷ್ಟು ಹಣಕ್ಕೆ ಬೇಡಿಕೆ ಇರಿಸಿದ್ದರು. ಬೇಸತ್ತ ವ್ಯಾಪಾರಿ ಠಾಣೆಗೆ ಬಂದು ದೂರು ನೀಡಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.