ADVERTISEMENT

ಹನಿ ಟ್ರ್ಯಾಪ್‌: ಆರು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 20:13 IST
Last Updated 9 ಮಾರ್ಚ್ 2023, 20:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವೇಶ್ಯಾವಾಟಿಕೆ ನೆಪದಲ್ಲಿ ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ₹ 10 ಲಕ್ಷಕ್ಕೆ ಬ್ಲ್ಯಾಕ್‌ಮೇಲ್ ಮಾಡಿದ್ದ ಆರೋಪದಡಿ ಇಬ್ಬರು ಮಹಿಳೆ ಸೇರಿ ಆರು ಮಂದಿಯನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ನಗರದ ನಿವಾಸಿಯಾದ 39 ವರ್ಷದ ಉದ್ಯಮಿಯೊಬ್ಬರು ಕೃತ್ಯದ ಬಗ್ಗೆ ಮಾರ್ಚ್ 8ರಂದು ದೂರು ನೀಡಿದ್ದರು. ಟಿ. ನರಸೀಪುರ ತಾಲ್ಲೂಕಿನ ಯಾಚೇನಹಳ್ಳಿಯ ವೈ.ಎಂ. ಅನಿಲ್‌ಕುಮಾರ್ (37), ಕುಣಿಗಲ್ ತಾಲ್ಲೂಕಿನ ನೊರಜನಕುಪ್ಪೆಯ ಗಿರೀಶ್ (36), ಬೆಂಗಳೂರು ಬ್ಯಾಟರಾಯನಪುರದ ಶಿವಶಂಕರ್ (50) ಹಾಗೂ ರಾಜಾಜಿನಗರ ಮರಿಯಪ್ಪನಪಾಳ್ಯದ ರಾಮಮೂರ್ತಿ (37) ಎಂಬುವವರನ್ನು ಬಂಧಿಸಲಾಗಿದೆ. ಬಂಧಿತ ಇಬ್ಬರು ಮಹಿಳೆಯರ ಹೆಸರು ಬಹಿರಂಗಪಡಿಸಲಾಗದು’ ಎಂದು ಪೊಲೀಸರು ಹೇಳಿದರು.

‘ಜಾಲತಾಣ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತು ನೀಡು ತ್ತಿದ್ದ ಆರೋಪಿಗಳು, ‘ಯುವತಿಯರು ಇದ್ದಾರೆ. ಎಲ್ಲ ರೀತಿಯ ಸೇವೆ ಲಭ್ಯ’ ಎನ್ನುತ್ತಿದ್ದರು. ಹಲವರು ಆರೋಪಿ ಗಳನ್ನು ಸಂಪರ್ಕಿಸುತ್ತಿದ್ದರು. ವೇಶ್ಯಾ ವಾಟಿಕೆ ಹೆಸರಿನಲ್ಲಿ ಜನರನ್ನು ಮನೆ
ಯೊಂದಕ್ಕೆ ಆಹ್ವಾನಿಸುತ್ತಿದ್ದ ಆರೋಪಿಗಳು, ಮಹಿಳೆಯರ ಜೊತೆ ಇರುವಂತೆ ಮಾಡಿ, ಅದೇ ಸಂದರ್ಭದಲ್ಲಿ ವಿಡಿಯೊ ಚಿತ್ರೀಕರಿಸಿ, ಹಣ ದೋಚುತ್ತಿದ್ದರು ಎಂಬುದು ತನಿಖೆ ಯಿಂದ ಗೊತ್ತಾಗಿದೆ’ ಎಂದು ತಿಳಿಸಿದರು.

ADVERTISEMENT

₹ 3 ಲಕ್ಷ ನೀಡಿದ್ದ ಉದ್ಯಮಿ: ‘ಜಾಹೀರಾತು ನೋಡಿದ್ದ ದೂರುದಾರ, ಆರೋಪಿಗಳನ್ನು ಸಂಪರ್ಕಿಸಿದ್ದರು. ಎಲ್ಲ ಬಗೆಯ ಯುವತಿಯರು ತಮ್ಮ ಬಳಿ ಇರುವುದಾಗಿ ಆರೋಪಿಗಳು ಹೇಳಿದ್ದರು. ಜೊತೆಗೆ, ದೇವರಚಿಕ್ಕನಹಳ್ಳಿಯ ಸೋಮೇಶ್ವರ ಬಡಾವಣೆಯಲ್ಲಿರುವ ಮನೆಗೆ ಬರುವಂತೆ ತಿಳಿಸಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಆರೋಪಿಗಳ ಮಾತು ನಂಬಿದ್ದ ದೂರುದಾರ, 2022ರ ಡಿ. 3ರಂದು ಸಂಜೆ ಮನೆಗೆ ಹೋಗಿದ್ದರು. ಅವರನ್ನು ಬರಮಾಡಿಕೊಂಡಿದ್ದ ಆರೋಪಿತ ಮಹಿಳೆ, ಕೊಠಡಿಗೆ ಕರೆದೊಯ್ದಿದ್ದರು. ಅರೆನಗ್ನಗೊಳಿಸಿ ಖಾಸಗಿ ಕ್ಷಣ ಕಳೆದಿದ್ದರು.’

‘ದೂರುದಾರರ ಅರೆನಗ್ನ ವಿಡಿಯೊವನ್ನು ಚಿತ್ರೀಕರಿಸಿಕೊಂಡಿದ್ದ ಆರೋಪಿ ಗಳು, ಮರುದಿನದಿಂದ ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದರು ಮರ್ಯಾದೆಗೆ ಅಂಜಿದ್ದ ದೂರುದಾರ, ₹ 3 ಲಕ್ಷ ನೀಡಿದ್ದರು. ಇದಾದ ನಂತರವೂ ಆರೋಪಿಗಳು ಮತ್ತಷ್ಟು ಹಣಕ್ಕೆ ಬೇಡಿಕೆ ಇರಿಸಿದ್ದರು. ಬೇಸತ್ತ ದೂರುದಾರ, ಠಾಣೆ ಮೆಟ್ಟಿಲೇರಿದ್ದರು. ದೂರು ದಾಖಲಾದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.