ADVERTISEMENT

ಹೊಸ ಬೆಳಕು: ಇವರು ಜಲ ಸಂರಕ್ಷಣೆಯ ಯೋಧರು

ಇಂಗುಗುಂಡಿ, ಬಾವಿ ನಿರ್ಮಿಸುವ ಪರಿಣತಿ l ನೀರು ಸಂಗ್ರಹದ ಕಾಯಕದಲ್ಲಿ ತಂಡ ನಿರತ

ಸಚ್ಚಿದಾನಂದ ಕುರಗುಂದ
Published 1 ಡಿಸೆಂಬರ್ 2021, 21:19 IST
Last Updated 1 ಡಿಸೆಂಬರ್ 2021, 21:19 IST
ಇಂಗು ಗುಂಡಿ ಮುಂದೆ ಪೆದ್ದಣ್ಣ
ಇಂಗು ಗುಂಡಿ ಮುಂದೆ ಪೆದ್ದಣ್ಣ   

ಬೆಂಗಳೂರು: ಇವರು ಮಳೆ ನೀರು ಸಂಗ್ರಹದ ಕಾಯಕದಲ್ಲಿ ತೊಡಗಿರುವ ಜಲ ಸಂರಕ್ಷಣೆಯ ಯೋಧರು.

‘ಮಳೆ ನೀರಿನ ಪ್ರತಿ ಹನಿಯನ್ನು ಹಿಡಿದು ಮರಳಿ ಭೂಮಿಗೆ ನೀಡಬೇಕು. ಟ್ಯಾಂಕರ್‌ಗಳನ್ನು ಕಡಿಮೆಗೊಳಿಸಿ, ಭೂಮಿ ಮರುಪೂರಣಗೊಳಿಸಬೇಕು’ ಎನ್ನುವ ಆಶಯದೊಂದಿಗೆ ಈ ತಂಡ ಕಾರ್ಯನಿರ್ವಹಿಸುತ್ತಿದೆ.

ಜಾಗ ಎಷ್ಟೇ ಇರಲಿ, ಇಂಗುಗುಂಡಿಗಳನ್ನು ಚೊಕ್ಕದಾಗಿ ವೈಜ್ಞಾನಿಕವಾಗಿ ನಿರ್ಮಿಸಿಕೊಡುವ ಕೈಚಳಕ ಹೊಂದಿದ್ದಾರೆ. ಬೆಂಗಳೂರು ಮಹಾನಗರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಇಂಗುಗುಂಡಿಗಳನ್ನು ಇವರು ನಿರ್ಮಿಸಿದ್ದಾರೆ.

ADVERTISEMENT

ನಗರದ ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ 20 ಜನರ ಈ ತಂಡ, ಇಂಗುಗುಂಡಿ ಮತ್ತು ಬಾವಿ ತೋಡುವಲ್ಲಿಯೂ ಪರಿಣತಿ ಸಾಧಿಸಿದ್ದಾರೆ. ಯಾವ ಪ್ರದೇಶದಲ್ಲಿ ಎಷ್ಟು ಆಳಕ್ಕೆ ನೀರು ಸಿಗುತ್ತದೆ ಎನ್ನುವುದನ್ನು ವಿಶ್ಲೇಷಣೆ ಮಾಡುವ ಚಾಕಚಕ್ಯತೆಯನ್ನು ಈ ತಂಡ ಹೊಂದಿದೆ. ಮಣ್ಣಿನ ಗುಣಲಕ್ಷಣಗಳನ್ನು ನೋಡಿ ನೀರು ಲಭ್ಯತೆ ಖಚಿತಪಡಿಸುತ್ತಾರೆ.

ಭೋವಿ ಸಮುದಾಯದ ಈ ತಂಡ, ತಲೆತಲಾಂತರಗಳಿಂದ ಬಾವಿ ತೋಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. 40 ವರ್ಷಗಳ ಅನುಭವ ಇರುವ ಪೆದ್ದಣ್ಣ ಅವರು 5,000ಕ್ಕೂ ಹೆಚ್ಚು ಬಾವಿಗಳನ್ನು ತೋಡಿದ್ದಾರೆ. ಇವರ ಮಗ ವೆಂಕಟೇಶ್ ಪೆದ್ದಣ್ಣ 2,000ಕ್ಕೂ ಹೆಚ್ಚು ಬಾವಿಗಳನ್ನು ತೋಡಿದ್ದಾರೆ.

ಪರಿಸ್ಥಿತಿ ಬದಲಾದಂತೆ ಬಾವಿಗಳನ್ನು ತೋಡುವ ಜತೆಗೆ, ನೀರು ಮರುಪೂರಣ ಕಾರ್ಯದಲ್ಲಿ ತೊಡಗಿದರು. ಇಂಗು ಗುಂಡಿಗಳ ನಿರ್ಮಾಣದ ಜತೆಗೆ, ಕೊಳವೆ ಬಾವಿಗಳ ಮರುಪೂರಣ ಹಾಗೂ ಬಾವಿಗಳ ಹೂಳು ತೆಗೆಯುವ ಕಾರ್ಯ ಕೈಗೊಂಡಿದ್ದಾರೆ. ಬಯೋಮ್–‌ ಎನ್ವಿರಾನ್‌ಮೆಂಟಲ್‌ ಸಲ್ಯೂಷನ್ಸ್‌ನ ‘ಮಿಲಿಯನ್‌ ವೆಲ್ಸ್‌’ ಅಭಿಯಾನದಲ್ಲಿ ಇವರು ಸಕ್ರಿಯವಾಗಿ ಭಾಗವಹಿಸಿದ್ದಾರೆ.

‘ಬಾವಿ ತೋಡುವ ಕಾರ್ಯ ನಮಗೆ ಬಳುವಳಿಯಾಗಿ ಬಂದಿದೆ. ನಮ್ಮದು ಏಳನೇ ಪೀಳಿಗೆ. ನಮ್ಮ ಹಿರಿಯರು ಕೆರೆ ಕಟ್ಟೆಗಳನ್ನು ಕಟ್ಟುವಲ್ಲಿ ನಿಸ್ಸೀಮರಾಗಿದ್ದರು. ಈಗ ಎಲ್ಲೆಡೆ ಕಾಂಕ್ರೀಟ್‌ನಿಂದ ಭೂಮಿಗೆ ನೀರು ಹರಿಯುತ್ತಿಲ್ಲ. ಎಲ್ಲ ಕಡೆ ಇಂಗು ಗುಂಡಿಗಳನ್ನು ಮಾಡಿದರೆ ನೀರು ಭೂಮಿಯಲ್ಲಿ ಇಂಗುತ್ತದೆ. ಜತೆಗೆ ಕೊಳವೆಬಾವಿಗಳು ಮರುಪೂರಣವಾಗುತ್ತದೆ. ಒಂದು ಇಂಚು ನೀರು ಲಭ್ಯವಾಗುವಲ್ಲಿ 2–3 ಇಂಚು ಬರುತ್ತದೆ’ ಎಂದು ವೆಂಕಟೇಶ್‌ ವಿವರಿಸಿದರು.

‘ಇಂಗು ಗುಂಡಿಗೆ 3 ಅಡಿ ಸುತ್ತಳತೆ ಮತ್ತು 15–20 ಅಡಿ ಆಳ ತೆಗೆಯಲಾಗುತ್ತಿದೆ. ಜತೆಗೆ ಕಲ್ಲಿನ ಜೆಲ್ಲಿ ಹಾಕಲಾಗುತ್ತದೆ. ನೀರು ಎತ್ತಲು ಮೋಟಾರ್‌ ಪಂಪ್‌ ಬಳಸಬಹುದು. ಇದಕ್ಕೆ ₹30 ಸಾವಿರ ಖರ್ಚಾಗಬಹುದು. ಬಯೋಮ್–‌ ಎನ್ವಿರಾನ್‌ಮೆಂಟಲ್‌ ಸಲ್ಯೂಷನ್ಸ್‌ನ ಮಾರ್ಗದರ್ಶನದಲ್ಲಿ ಇಂಗು ಗುಂಡಿಗಳನ್ನು ತೆಗೆಯಲಾಗುತ್ತದೆ’ ಎಂದು ತಿಳಿಸಿದರು.

’ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ವ್ಯಕ್ತಿಯೊಬ್ಬರು 1,200 ಅಡಿ ಕೊಳವೆಬಾವಿ ಕೊರೆದರೂ ನೀರು ಲಭ್ಯವಾಗಿರಲಿಲ್ಲ. ಟ್ಯಾಂಕರ್‌ ಮೂಲಕ ನೀರು ತಂದು ಅವರು ಮನೆ ನಿರ್ಮಿಸಿದರು. ನಂತರ ನಾವು ಸವಾಲಾಗಿ ಸ್ವೀಕರಿಸಿದೆವು. ಕೇವಲ 15 ಅಡಿ ಬಾವಿ ಕೊರೆದಾಗ ನೀರು ದೊರೆಯಿತು. ನೀರು ಸಿಕ್ಕಿದರೆ ಕಾಸು, ಇಲ್ಲದಿದ್ದರೆ ಬೇಡ ಎಂದು ಮನೆಯ ಮಾಲೀಕರಿಗೆ ಹೇಳಿದ್ದೆ. ನಮ್ಮ ತಿಳಿವಳಿಕೆ ಮತ್ತು ಜ್ಞಾನ ಆಧರಿಸಿ ಇಂತಹ ಸವಾಲು ಸ್ವೀಕರಿಸುತ್ತೇವೆ’ ಎಂದು ವೆಂಕಟೇಶ್‌ ಹೇಳುತ್ತಾರೆ.

ಸಂಪರ್ಕಕ್ಕೆ: 9080739674, 9655421005

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.