ADVERTISEMENT

ಹೊಸಕೆರೆಹಳ್ಳಿ ಮೇಲ್ಸೇತುವೆ| ಕಾಮಗಾರಿ ಮುಗಿಸಲು 3 ತಿಂಗಳ ಗಡುವು: ಮಹೇಶ್ವರ್ ರಾವ್‌

​ಪ್ರಜಾವಾಣಿ ವಾರ್ತೆ
Published 31 ಮೇ 2025, 19:47 IST
Last Updated 31 ಮೇ 2025, 19:47 IST
ಎಂ. ಮಹೇಶ್ವರ ರಾವ್‌
ಎಂ. ಮಹೇಶ್ವರ ರಾವ್‌   

ಬೆಂಗಳೂರು: ಹೊಸಕೆರೆಹಳ್ಳಿ ಜಂಕ್ಷನ್ ಮೇಲ್ಸೇತುವೆ ಕಾಮಗಾರಿಯನ್ನು ಮೂರು ತಿಂಗಳಲ್ಲಿ ಮುಗಿಸಬೇಕು, ರಾಜರಾಜೇಶ್ವರಿ ನಗರ ಆರ್ಚ್‌ ಬಳಿಯ ಮೇಲ್ಸೇತುವೆಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಮುಂದುವರಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.

ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶನಿವಾರ ಪರಿಶೀಲನೆ ನಡೆಸಿದರು.

ಹೊರ ವರ್ತುಲ ರಸ್ತೆಯ ಪಿಇಎಸ್ ಕಾಲೇಜು ಬಳಿಯ ಹೊಸಕೆರೆಹಳ್ಳಿ ಜಂಕ್ಷನ್‌ನಲ್ಲಿ ಕೈಗೆತ್ತಿಕೊಂಡಿರುವ ಮೇಲ್ಸೇತುವೆ ಕಾಮಗಾರಿಗೆ ವೇಗ ನೀಡಿ ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಹೊಸರೆರೆಹಳ್ಳಿ ಜಂಕ್ಷನ್‌ನಲ್ಲಿ 500 ಮೀಟರ್ ಉದ್ದದ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ ಶೇ 75 ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಇನ್ನು ಒಂದು ಭಾಗದಲ್ಲಿ ಡೌನ್ ರ‍್ಯಾಂಪ್ ಕಾಮಗಾರಿ ಪ್ರಗತಿಯಲಿದ್ದು, ಸರ್ವೀಸ್ ರಸ್ತೆಯ ಅಗಲೀಕರಣ ಮಾಡುವ ವಿಚಾರವಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ ಸಂಚಾರ ಪೊಲೀಸ್ ವಿಭಾಗದ ಜೊತೆ ಮಾತನಾಡಿ, ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಾಯಂಡಹಳ್ಳಿ ಜಂಕ್ಷನ್ ಬಳಿಯ ಸರ್ವೀಸ್ ರಸ್ತೆಯ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಅನುಪಯುಕ್ತ ವಸ್ತುಗಳಿರುವುದನ್ನು ಕಂಡು, ಅದನ್ನು ಕೂಡಲೇ ತೆರವು ಮಾಡಲು ಸೂಚಿಸಿದರು. ಮೇಲ್ಸೇತುವೆಯ ಕೆಳಭಾಗದಲ್ಲಿ ಅನಧಿಕೃತವಾಗಿ ಪಾರ್ಕಿಂಗ್ ಅನ್ನು ತೆರವುಗೊಳಿಸಲು ಹೇಳಿದರು.

ವೃಷಭಾವತಿ ವ್ಯಾಲಿ ಮೇಲ್ಭಾಗದಲ್ಲಿ ಹೆಚ್ಚುವರಿಯಾಗಿ ಬ್ರಿಡ್ಜ್ ವೆಂಟ್ ನಿರ್ಮಿಸಲು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ, ಕಾಮಗಾರಿಯನ್ನು ಆರಂಭಿಸಲು ಸೂಚಿಸಿದರು.

ವೃಷಭಾವತಿ ವ್ಯಾಲಿಯಲ್ಲಿ ದೊಡ್ಡದಾದ ಒಳಚರಂಡಿ ಕೊಳವೆಮಾರ್ಗ ಹಾದುಹೋಗಿದ್ದು, ಅದರಿಂದ ಆಗುತ್ತಿರುವ ಸೋರಿಕೆ ತಡೆಯಲು ಜಲಮಂಡಳಿ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಮಾತನಾಡಲು ಬಿಬಿಎಂಪಿ ಅಧಿಕಾರಿಗಳಿಗೆ ಹೇಳಿದರು.

ಭೂಸ್ವಾಧೀನ: ರಾಜರಾಜೇಶ್ವರಿ ನಗರ ಆರ್ಚ್‌– ಮೈಸೂರು ರಸ್ತೆಯಲ್ಲಿ ಮೇಲ್ಸೇತುವೆ ಕಾಮಗಾರಿ 33 ಆಸ್ತಿಗಳ ಭೂಸ್ವಾಧೀನ ಪ್ರಕ್ರಿಯೆ ನಡೆಯದೆ ಸ್ಥಗಿತಗೊಂಡಿದೆ. ಇದನ್ನು ಕೂಡಲೇ ಪೂರ್ಣಗೊಳಿಸಿ, ಕಾಮಗಾರಿಯನ್ನು ಪುನರಾರಂಭಿಸಲು ಮಹೇಶ್ವರ್‌ ರಾವ್‌ ಅಧಿಕಾರಿಗಳಿಗೆ ಸೂಚಿಸಿದರು.

ಮೈಸೂರು ರಸ್ತೆ ದೀಪಾಂಜಲಿ ನಗರ ಮೆಟ್ರೊ ನಿಲ್ದಾಣದ ಬಳಿ ಬಿಎಚ್‌ಇಎಲ್‌ ಜಂಕ್ಷನ್ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.