ADVERTISEMENT

‘ಪರವಾನಗಿ 5 ವರ್ಷಕ್ಕೊಮ್ಮೆ ನವೀಕರಣ’

ಹೋಟೆಲ್‌ ಮಾಲೀಕರ ಸಂಘದ ‘ಆಹಾರ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 19:56 IST
Last Updated 17 ಆಗಸ್ಟ್ 2019, 19:56 IST
ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ. ಮೋಹನ್ ಅವರು ಪಾರ್ಕ್‌ವ್ಯೂವ್‌ ರೆಸ್ಟೊರೆಂಟ್‌ ಮಾಲೀಕರಾದ ನರಸಿಂಹ ಮೂರ್ತಿ ಅವರಿಗೆ ಉತ್ತಮ ಶೈಲಿಯ ದರ್ಶಿನಿ ಹೋಟೆಲ್ ಪ್ರಶಸ್ತಿ ಪ್ರದಾನ ಮಾಡಿದರು. ಸಂಘದ ಅಧ್ಯಕ್ಷ ಪಿ.ಸಿ.ರಾವ್ ಇದ್ದಾರೆ    –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ. ಮೋಹನ್ ಅವರು ಪಾರ್ಕ್‌ವ್ಯೂವ್‌ ರೆಸ್ಟೊರೆಂಟ್‌ ಮಾಲೀಕರಾದ ನರಸಿಂಹ ಮೂರ್ತಿ ಅವರಿಗೆ ಉತ್ತಮ ಶೈಲಿಯ ದರ್ಶಿನಿ ಹೋಟೆಲ್ ಪ್ರಶಸ್ತಿ ಪ್ರದಾನ ಮಾಡಿದರು. ಸಂಘದ ಅಧ್ಯಕ್ಷ ಪಿ.ಸಿ.ರಾವ್ ಇದ್ದಾರೆ    –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಹೋಟೆಲ್‌ ಮಾಲೀಕರು ಉದ್ದಿಮೆ ಪರವಾನಗಿಯನ್ನು ಇನ್ನು ಮುಂದೆ ಐದು ವರ್ಷಗಳಿಗೊಮ್ಮೆ ನವೀಕರಣ ಮಾಡಿಸಿದರೆ ಸಾಕು. ಪ್ರತಿ ವರ್ಷವೂ ನವೀಕರಿಸಬೇಕಿಲ್ಲ’ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್‌ ಪ್ರಸಾದ್‌ ತಿಳಿಸಿದರು.

ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಸ್ಥೆ ವತಿಯಿಂದ ಅತ್ಯುತ್ತಮ ಹೋಟೆಲ್‌ಗಳಿಗೆ ನೀಡಲಾದ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಮಾತನಾಡಿದ ಅವರು, ‘ವ್ಯಾಪಾರ ಪರವಾನಗಿಯನ್ನು ಆನ್‌ಲೈನ್‌ನಲ್ಲಿಯೇ ಪಡೆಯುವ ವ್ಯವಸ್ಥೆ ತರಲಾಗುವುದು’ ಎಂದು ತಿಳಿಸಿದರು.

ಐದು ಪಟ್ಟು ದಂಡ:‘ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ದಂಡದ ಪ್ರಮಾಣವನ್ನು ಐದು ಪಟ್ಟು ಹೆಚ್ಚಿಸಲಾಗಿದ್ದು, ಸೆ.1ರಿಂದಲೇ ಈ ನಿಯಮ ಜಾರಿಗೆ ಬರಲಿದೆ. ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್‌ ಬಾಟಲಿ, ಕವರ್‌ಗಳು ದೊರೆತರೆ ಮೊದಲ ಬಾರಿಗೆ ₹ 25 ಸಾವಿರ, ಎರಡನೇ ಬಾರಿಗೆ ₹50 ಸಾವಿರ ದಂಡ ವಿಧಿಸಲಾಗುವುದು. ಕಸ ವಿಂಗಡಿಸುವುದೂ ಕಡ್ಡಾಯ’ ಎಂದರು.

ADVERTISEMENT

ಸಂಘದ ಅಧ್ಯಕ್ಷ ಪಿ.ಸಿ. ರಾವ್‌, ‘ಹೊರಾಂಗಣ ಕೆಟರಿಂಗ್‌ ಸೇವೆ ಮೇಲೆ ಶೇ 18ರಷ್ಟು ಜಿಎಸ್‌ಟಿ ಇದೆ. ಅಂದರೆ, ₹10 ಲಕ್ಷ ಮೊತ್ತದ ಬಿಲ್‌ಗೆ ₹2 ಲಕ್ಷದಷ್ಟು ಜಿಎಸ್‌ಟಿ ಕಟ್ಟಬೇಕಾಗಿದೆ. ಇದನ್ನು ಶೇ 5ಕ್ಕೆ ಇಳಿಸಬೇಕು’ ಎಂದು ಮನವಿ ಮಾಡಿದರು.

ಸಂಸದ ತೇಜಸ್ವಿ ಸೂರ್ಯ, ‘ಈ ಕುರಿತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಜತೆ ಚರ್ಚಿಸಿದ್ದೇನೆ. ರಾಜ್ಯ ಸರ್ಕಾರದಿಂದ ಪ್ರಸ್ತಾವ ಜಿಎಸ್‌ಟಿ ಮಂಡಳಿಯಲ್ಲಿ ಮಂಡಿಸಿದರೆ, ಈ ಪ್ರಮಾಣ ಕಡಿಮೆಗೊಳಿಸುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದರು.

ಪ್ರಶಸ್ತಿ ವಿಜೇತರ ಪಟ್ಟಿ

lಅತ್ಯುತ್ತಮ ದರ್ಶಿನಿ ಶೈಲಿ ರೆಸ್ಟೊರೆಂಟ್‌ : ಪಾರ್ಕ್‌ ವ್ಯೂವ್‌ ರೆಸ್ಟೊರೆಂಟ್‌

lಸಾಮಾನ್ಯ ಊಟದ ಹೋಟೆಲ್‌ (ಸಸ್ಯಾಹಾರ): ರಜತಾದ್ರಿ ಪ್ಯಾಲೇಸ್‌

lಸಾಮಾನ್ಯ ಊಟದ ಹೋಟೆಲ್‌ (ಮಾಂಸಾಹಾರ): ನಂದನ ಪ್ಯಾಲೇಸ್‌

lಐಷಾರಾಮಿ ಊಟದ ಹೋಟೆಲ್‌: ಜಲಪಾನ್‌

lಸಿಹಿ ತಿಂಡಿಗಳ ಹೋಟೆಲ್‌ : ಆಶಾ ಸ್ವೀಟ್ಸ್‌ ಸೆಂಟರ್‌

lಅತ್ಯುತ್ತಮ ಬೇಕರಿ : ಕೇಕ್‌ವಾಲಾ

lಅತ್ಯುತ್ತಮ ವಸತಿ ಹೋಟೆಲ್‌: ಎಸ್‌ಎಫ್‌ಒ ಹೋಟೆಲ್ಸ್‌ ಆ್ಯಂಡ್‌ ಸೂಟ್ಸ್‌

lಅತ್ಯುತ್ತಮ ಉದಯೋನ್ಮುಖ ಹೋಟೆಲ್‌ : ಸ್ವಾತಿ ಹೋಟೆಲ್‌ ಸಮೂಹ

lಜೀವಮಾನ ಸಾಧನೆ ಪ್ರಶಸ್ತಿ: ಚಂದ್ರಶೇಖರ್‌ ಹೆಬ್ಬಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.