ADVERTISEMENT

110 ಹೋಟೆಲ್‌ಗಳ ಮೇಲೆ ಪಾಲಿಕೆ ದಾಳಿ: 4 ಹೋಟೆಲ್‌ಗಳಿಗೆ ಬೀಗ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 19:48 IST
Last Updated 20 ಮಾರ್ಚ್ 2019, 19:48 IST
ರಾಜಾಜಿನಗರದ ಮೋದಿ ಆಸ್ಪತ್ರೆ ಬಳಿಯ ಬಾರ್ ಮತ್ತು ರೆಸ್ಟೋರೆಂಟ್‌ಗೆ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿದ ವೇಳೆ ರೆಸ್ಟೋರೆಂಟ್‌ ಸಿಬ್ಬಂದಿ ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು ಪ್ರಜಾವಾಣಿ ಚಿತ್ರ
ರಾಜಾಜಿನಗರದ ಮೋದಿ ಆಸ್ಪತ್ರೆ ಬಳಿಯ ಬಾರ್ ಮತ್ತು ರೆಸ್ಟೋರೆಂಟ್‌ಗೆ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿದ ವೇಳೆ ರೆಸ್ಟೋರೆಂಟ್‌ ಸಿಬ್ಬಂದಿ ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ಐದು ವಲಯಗಳಲ್ಲಿ ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳು ಸೇರಿದಂತೆ 110 ಮಳಿಗೆಗಳಿಗೆ ಪಾಲಿಕೆ ಆರೋಗ್ಯಾಧಿಕಾರಿಗಳು ಬುಧವಾರ ರಾತ್ರಿ ಏಕಕಾಲದಲ್ಲಿ ದಿಢೀರ್‌ ದಾಳಿ ನಡೆಸಿದರು. ಶುಚಿತ್ವ ಕಾಪಾಡದ ಹಾಗೂ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್‌ಗಳಲ್ಲಿ ಕಟ್ಟಿಕೊಡುತ್ತಿದ್ದ ಹೋಟೆಲ್‌ಗಳಿಗೆ ದಂಡ ವಿಧಿಸಿದರು.

ಶುಚಿತ್ವ ಕಾಪಾಡದ, ಹಸಿ ಮತ್ತು ಒಣ ಕಸವನ್ನು ವಿಂಗಡಿಸದ ಕಾರಣ ಕೋರಮಂಗಲದಲ್ಲಿ ಹಾಗೂ ರಾಜಾಜಿನಗರದಲ್ಲಿ ತಲಾ 2 ಹೋಟೆಲ್‌ಗಳಿಗೆ ಅಧಿಕಾರಿಗಳು ಬೀಗ ಹಾಕಲಾಗಿದೆ. ದಾಳಿಯ ವೇಳೆ ಒಟ್ಟು 1,074 ಕೆ.ಜಿ. ಪ್ಲಾಸ್ಟಿಕ್‌ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ₹ 14.42 ಲಕ್ಷ ದಂಡ ವಿಧಿಸಲಾಗಿದೆ.

‘ಆಹಾರ ಪದಾರ್ಥಗಳನ್ನು ಕಟ್ಟಿಕೊಡಲು ಪ್ಲಾಸ್ಟಿಕ್‌ ಬಳಸದಂತೆ ನಾವು ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ಹೋಟೆಲ್‌ ಮಾಲೀಕರು ಈ ಪರಿಪಾಠ ನಿಲ್ಲಿಸಿರಲಿಲ್ಲ. ಹಾಗಾಗಿ ದಿಡೀರ್‌ ದಾಳಿ ನಡೆಸುವ ತೀರ್ಮಾನಕ್ಕೆ ಬಂದೆವು’ ಎಂದು ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಮನೋರಂಜನ್‌ ಹೆಗ್ಡೆ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಹೋಟೆಲ್‌ಗಳು ಬೇಸಿಗೆಯಲ್ಲಿ ಶುಚಿತ್ವದ ಬಗ್ಗೆ ತೀವ್ರ ನಿಗಾ ವಹಿಸುವುದು ತೀರಾ ಅಗತ್ಯ. ಇಲ್ಲದಿದ್ದರೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಶುಚಿತ್ವ ಕಾಪಾಡದ ಹೋಟೆಲ್‌ಗಳಿಗೂ ದಂಡ ವಿಧಿಸಿದ್ದೇವೆ’ ಎಂದರು.

‘ಆಹಾರ ಪದಾರ್ಥಗಳನ್ನು ಕಟ್ಟಿಕೊಡಲು ಪ್ಲಾಸ್ಟಿಕ್‌ ಸಾಮಗ್ರಿ ಬಳಸಬಾರದು ಎಂದು ಹೋಟೆಲ್‌ ಮಾಲೀಕರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡುತ್ತಿದ್ದೇವೆ. ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಲ್ಲಿಸುವವರೆಗೂ ದಿಢೀರ್‌ ದಾಳಿ ಮುಂದುವರಿಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.