ADVERTISEMENT

‘ಕಾಂಗ್ರೆಸ್‌ನಲ್ಲಿಲ್ಲ ಶಿಸ್ತಿನ ಪ್ರಚಾರ’

ಕೇಂದ್ರಿಕೃತ ಪ್ರಚಾರ ವ್ಯವಸ್ಥೆ ಅಳವಡಿಸಿಕೊಂಡಿರುವ ಬಿಜೆಪಿ: ಲೇಖಕ ಸುಧೀರ್ ಕೃಷ್ಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2019, 18:09 IST
Last Updated 9 ಮಾರ್ಚ್ 2019, 18:09 IST
ಸುಹಾಸ್‌ ಪಲ್ಶಿಕರ್‌(ಎಡದಿಂದ ಐದನೆಯವರು) ಪುಸ್ತಕ ಬಿಡುಗಡೆ ಮಾಡಿ ಸುಧೀರ್‌ ಕೃಷ್ಣಸ್ವಾಮಿ ಅವರಿಗೆ ನೀಡಿದರು. ಲೇಖಕರಾದ ಯತೀಂದ್ರ ಸಿಂಗ್‌ ಸಿಸೊಡಿಯಾ, ಜೈನ್‌ ವಿಶ್ವವಿದ್ಯಾಲಯದ ಕುಲಪತಿ ಸಂದೀಪ್‌ ಶಾಸ್ತ್ರಿ, ಸಂಜಯ್‌ ಕುಮಾರ್‌, ಟಿ.ಎಂ.ವೀರರಾಘವ್‌, ಅಶುತೊಷ್‌ ಕುಮಾರ್‌ ಇದ್ದರು   ---–ಪ್ರಜಾವಾಣಿ ಚಿತ್ರ
ಸುಹಾಸ್‌ ಪಲ್ಶಿಕರ್‌(ಎಡದಿಂದ ಐದನೆಯವರು) ಪುಸ್ತಕ ಬಿಡುಗಡೆ ಮಾಡಿ ಸುಧೀರ್‌ ಕೃಷ್ಣಸ್ವಾಮಿ ಅವರಿಗೆ ನೀಡಿದರು. ಲೇಖಕರಾದ ಯತೀಂದ್ರ ಸಿಂಗ್‌ ಸಿಸೊಡಿಯಾ, ಜೈನ್‌ ವಿಶ್ವವಿದ್ಯಾಲಯದ ಕುಲಪತಿ ಸಂದೀಪ್‌ ಶಾಸ್ತ್ರಿ, ಸಂಜಯ್‌ ಕುಮಾರ್‌, ಟಿ.ಎಂ.ವೀರರಾಘವ್‌, ಅಶುತೊಷ್‌ ಕುಮಾರ್‌ ಇದ್ದರು   ---–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕಾಂಗ್ರೆಸ್‌ನಲ್ಲಿ ಇನ್ನೂ ಸಾಂಪ್ರದಾಯಿಕ ಪ್ರಚಾರ ಮಾದರಿಗಳನ್ನೇ ಅನುಸರಿಸುತ್ತಿದ್ದಾರೆ. ಬಿಜೆಪಿಯವರು ಕೇಂದ್ರಿಕೃತ ಪ್ರಚಾರ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಹಾಗಾಗಿ ಬಿಜೆಪಿ ಜನರಿಗೆ ತಲುಪುತ್ತಿದೆ’ ಎಂದು ಲೇಖಕ ಸುಧೀರ್‌ ಕೃಷ್ಣಸ್ವಾಮಿ ಹೇಳಿದರು.

‘ಕಾಂಗ್ರೆಸ್‌ ಕಚೇರಿಗಳಲ್ಲಿ ಇನ್ನೂ ಭೂಮಾಲೀಕರ ದಲ್ಲಾಳಿಗಳು ಓಡಾಡುತ್ತಿದ್ದಾರೆ. ಅವರ ಮಾತನ್ನು ಯುವ ಕಾರ್ಯಕರ್ತರು ಕೇಳಬೇಕಿದೆ. ಆದರೆ, ಬಿಜೆಪಿಯಲ್ಲಿ ಹಾಗಿಲ್ಲ. ಇಲ್ಲಿ ಪಕ್ಷ ಪ್ರಚಾರದ 28 ವರ್ಷದ ಮುಖಂಡನಿಗೆ 60 ವರ್ಷ ದಾಟಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರೂ ವರದಿ ನೀಡುತ್ತಾರೆ. ಬಿಜೆಪಿಯಲ್ಲಿ ಪಕ್ಷಾಧ್ಯಕ್ಷರ ಕೇಂದ್ರಿತ ಶಿಸ್ತುಬದ್ಧ ಪ್ರಚಾರವಿದೆ’ ಎಂದು ವಿವರಿಸಿದರು.

ಜೈನ್‌ ಡೀಮ್ಡ್‌ ಟು–ಬಿ ವಿಶ್ವವಿದ್ಯಾಲಯ ಮತ್ತು ಲೋಕನೀತಿ ಸಂಸ್ಥೆ ಆಯೋಜಿಸಿದ್ದ ‘ಹೌ ಇಂಡಿಯಾ ವೋಟ್ಸ್‌: ಎ ಸ್ಟೇಟ್‌ ಬೈ ಸ್ಟೇಟ್‌ ಲುಕ್‌’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಚುನಾವಣೆಯಲ್ಲಿ ರಾಷ್ಟ್ರೀಯ ನಾಯಕರು ಎಷ್ಟೇ ಪ್ರಚಾರ ಮಾಡಿದರೂ ಕ್ಷೇತ್ರದಲ್ಲಿನ ಸ್ಥಳೀಯ ಪ್ರಚಾರವೇ ಬಹುತೇಕ ಸ್ಥಾನಗಳನ್ನು ಗೆಲ್ಲಲು ನೆರವಾಗುತ್ತದೆ’ ಎಂದರು.

ಲೋಕನೀತಿ ಸಂಸ್ಥೆಯ ಸಹ ಸಂಸ್ಥಾಪಕ ಸುಹಾಸ್‌ ಪಲ್ಶಿಕರ್‌, ‘ರಾಷ್ಟ್ರೀಯ ಚಳವಳಿಯ ಭಾರತವನ್ನು 2014ರ ಚುನಾವಣೆಯಲ್ಲಿ ಪಕ್ಕಕ್ಕೆ ತಳ್ಳಲಾಯಿತು. ನವಭಾರತ ಎಂಬ ಪರಿಕಲ್ಪನೆಯನ್ನು ಮುನ್ನೆಲೆಗೆ ತರಲಾಯಿತು. 2019ರಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದರೆ, ನವಭಾರತದ ಆಲೋಚನಾ ಕ್ರಮ, ಸಾಮಾಜಿಕ ಸಂಬಂಧಗಳಲ್ಲಿ ಗಮನಾರ್ಹ ಬದಲಾವಣೆಗಳು ಆಗಲಿವೆ’ ಎಂದು ಅಭಿಪ್ರಾಯಪಟ್ಟರು.

‘ಬಿಜೆಪಿಯನ್ನು ‘ಭಕ್ತರು’ ಕಣ್ಣು ಮುಚ್ಚಿಕೊಂಡು ಬೆಂಬಲಿಸುತ್ತಿದ್ದಾರೆ. ಮೋದಿಗೆ ಬೆಂಬಲ ಯಾಕೆ ನೀಡಬೇಕು ಎಂದು ಕೇಳಿದರೆ, ಅವರಿಂದ ಸ್ಪಷ್ಟ ಉತ್ತರ ಬರಲ್ಲ. ಹಿಂದೂ ವೇದಿಕೆ ಮೇಲೆ ನಿಂತಿರುವ ಬಿಜೆಪಿ ಈ ಬಾರಿ ಮುಗ್ಗರಿಸಿದರೆ, ಬಹಳಷ್ಟು ಬದಲಾವಣೆ ಆಗಲಿದೆ’ ಎಂದು ಪತ್ರಕರ್ತ ಟಿ.ಎಂ.ವೀರರಾಘವ್ ಹೇಳಿದರು.

ಪುಸ್ತಕದ ಕುರಿತು

ಪುಸ್ತಕ: ಹೌ ಇಂಡಿಯಾ ವೋಟ್ಸ್‌: ಎ ಸ್ಟೇಟ್‌ ಬೈ ಸ್ಟೇಟ್‌ ಲುಕ್‌

ಲೇಖಕರು: ಅಶುತೋಷ್‌ ಕುಮಾರ್‌ ಮತ್ತು ಯತೀಂದ್ರ ಸಿಂಗ್‌ ಸಿಸೋಡಿಯಾ

ಪುಟಗಳು: 443

ಬೆಲೆ: ₹ 1395

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.