ADVERTISEMENT

ಬಿಡಿಎ ವಿಲ್ಲಾಗೆ ಭಾರಿ ಬೇಡಿಕೆ

ಆನ್‌ಲೈನ್‌ನಲ್ಲಿ ಒಂದೆರಡು ತಿಂಗಳಲ್ಲಿ ಮಾರಾಟಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 18 ಮೇ 2023, 23:30 IST
Last Updated 18 ಮೇ 2023, 23:30 IST
ಹುಣ್ಣಿಗೆರೆ ಬಳಿ ‘ಪುನೀತ್‌ ರಾಜ್‌ಕುಮಾರ್‌ ವಸತಿ ಯೋಜನೆ’ಯಡಿ ವಿಲ್ಲಾ ನಿರ್ಮಾಣ ಕಾಮಗಾರಿಯನ್ನು ಬಿಡಿಎ ಆಯುಕ್ತ ಕುಮಾರ ನಾಯಕ್‌ ಗುರುವಾರ ಪರಿಶೀಲಿಸಿದರು. ಎಂಜಿನಿಯರ್‌ ಸದಸ್ಯ ಶಾಂತರಾಜಣ್ಣ, ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಕಾಶ್‌ ಇದ್ದರು
ಹುಣ್ಣಿಗೆರೆ ಬಳಿ ‘ಪುನೀತ್‌ ರಾಜ್‌ಕುಮಾರ್‌ ವಸತಿ ಯೋಜನೆ’ಯಡಿ ವಿಲ್ಲಾ ನಿರ್ಮಾಣ ಕಾಮಗಾರಿಯನ್ನು ಬಿಡಿಎ ಆಯುಕ್ತ ಕುಮಾರ ನಾಯಕ್‌ ಗುರುವಾರ ಪರಿಶೀಲಿಸಿದರು. ಎಂಜಿನಿಯರ್‌ ಸದಸ್ಯ ಶಾಂತರಾಜಣ್ಣ, ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಕಾಶ್‌ ಇದ್ದರು   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ದಾಸನಪುರ ಹೋಬಳಿಯ ಹುಣ್ಣಿಗೆರೆಯಲ್ಲಿ ನಿರ್ಮಿಸುತ್ತಿರುವ ‘ಪುನೀತ್‌ ರಾಜ್‌ಕುಮಾರ್‌ ವಸತಿ ಸಂಕೀರ್ಣ’ದ ವಿಲ್ಲಾಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದ್ದು, ಇನ್ನೊಂದು ತಿಂಗಳಲ್ಲಿ ಮಾರಾಟಕ್ಕೆ ಸಿದ್ಧವಾಗಲಿವೆ.‌

ಡುಪ್ಲೆಕ್ಸ್‌ ಮಾದರಿಯಲ್ಲಿ 322 ವಿಲ್ಲಾಗಳನ್ನು ಬಿಡಿಎ ನಿರ್ಮಿಸಿದ್ದು, ರಸ್ತೆ ಕೆಲಸ, ಉದ್ಯಾನ ಕಾಮಗಾರಿ ಹಾಗೂ ವಿದ್ಯುತ್‌ ಸಂಪರ್ಕದ ವ್ಯವಸ್ಥೆ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಪ್ರತಿ ದಿನ ಸಾಕಷ್ಟು ಜನ ಬಂದು ವಿಲ್ಲಾಗಳನ್ನು ನೋಡಿಕೊಂಡು ಹೋಗುತ್ತಿದ್ದಾರೆ. ವಾರಾಂತ್ಯದಲ್ಲಿ ಬರುವ ಜನರ ಸಂಖ್ಯೆ ಅಧಿಕವಾಗಿದೆ ಎಂದು ಬಿಡಿಎ ಅಧಿಕಾರಿಗಳು ಹೇಳಿದರು.

ಆನ್‌ಲೈನ್‌ ಮೂಲಕ ಮೊದಲು ಬಂದವರಿಗೆ ಆದ್ಯತೆ ಆಧಾರದಲ್ಲಿ ಈ ವಿಲ್ಲಾಗಳನ್ನು ಮಾರಾಟ ಮಾಡಲು ಬಿಡಿಎ ನಿರ್ಧರಿಸಿದೆ. ವಿಲ್ಲಾಗಳ ದರ ₹80 ಲಕ್ಷದಿಂದ ₹1.10 ಕೋಟಿಯವರೆಗೆ ನಿಗದಿಪಡಿಸುವ ಸಾಧ್ಯತೆ ಇದೆ. ವಿಲ್ಲಾಗಳ ಸಂಖ್ಯೆ ಕಡಿಮೆ ಇವೆ. ಅಲ್ಲದೆ, ವಿವಿಐಪಿಗಳೇ ಹೆಚ್ಚಿನ ಆಸಕ್ತಿ ತೋರುತ್ತಿರುವುದು ಬಯಸಿದವರಿಗೆಲ್ಲ ವಿಲ್ಲಾ ಸಿಗುವ ಸಾಧ್ಯತೆ ಕ್ಷೀಣವಾಗಿದೆ.

ADVERTISEMENT

ವಿಲ್ಲಾ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಬಿಡಿಎ ಆಯುಕ್ತ ಕುಮಾರ ನಾಯಕ್‌ ಅವರು ಗುರುವಾರ ಸ್ಥಳ ಪರಿಶೀಲನೆ ನಡೆಸಿದರು.

ವಿಲ್ಲಾಗಳನ್ನು ಡುಪ್ಲೆಕ್ಸ್‌ ಮಾದರಿಯಲ್ಲಿ ನಿರ್ಮಿಸಲಾಗಿದ್ದು, ಇಟ್ಟಿಗೆಯನ್ನೇ ಉಪಯೋಗಿಸಲಾಗಿದೆ. ವಾಸ್ತುವಿಗೆ ಅನುಗುಣವಾಗಿ, ಕಟ್ಟಡ, ಒಳಾಂಗಣ ವಿನ್ಯಾಸ ಮಾಡಲಾಗಿದೆ. ಪ್ರತಿ ವಿಲ್ಲಾಗೆ ಎರಡು ಕೊಳವೆ ಮಾರ್ಗವಿದ್ದು, ಸಂಸ್ಕರಿಸಿದ ನೀರಿನ ಬಳಕೆಗೆ ಒತ್ತು ನೀಡಲಾಗಿದೆ. ಸೋಲಾರ್‌ ವಾಟರ್‌ ಹೀಟರ್‌, ಸಂಪ್‌, ಓವರ್‌ಹೆಡ್‌ ಟ್ಯಾಂಕ್‌ ಪ್ರತಿ ವಿಲ್ಲಾನಲ್ಲಿದೆ.  ಮೂರು ಮತ್ತು ನಾಲ್ಕು ಬಿಎಚ್‌ಕೆ ವಿಲ್ಲಾಗಳಿಗೆ ಪ್ರತ್ಯೇಕ ಗೇಟ್‌ ಅಳವಡಿಸಿ,  ಮುಖ್ಯರಸ್ತೆಯಿಂದ ಪ್ರತ್ಯೇಕ ಮಾರ್ಗ ಕಲ್ಪಿಸಲಾಗಿದೆ. ಇ.ವಿ. ಚಾರ್ಚಿಂಗ್‌ ಸಂಪರ್ಕವಿದ್ದು, ಮಳೆ ನೀರಿನ ಸಂಗ್ರಹಕ್ಕೂ ವ್ಯವಸ್ಥೆ ಇದೆ. ಡಕ್ಟ್‌ ಮಾದರಿಯಲ್ಲಿ ನೀರು ಹಾಗೂ ವಿದ್ಯುತ್‌ ಕೇಬಲ್‌ ಅಳವಡಿಸಲಾಗಿದೆ. ಇದಲ್ಲದೆ, 320 ಒಂದು ಬಿಎಚ್‌ಕೆ ಮನೆಗಳೂ ಇಲ್ಲಿವೆ.

ವಸತಿ ಯೋಜನೆಯನ್ನು 26 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಿದ್ದು, 27 ಉದ್ಯಾನಗಳಿವೆ. ಸುತ್ತ 2.1 ಮೀ ಎತ್ತರದ ರಕ್ಷಣಾ ಗೋಡೆ ನಿರ್ಮಿಸಲಾಗಿದೆ. ಮನೋರಂಜನಾ ಕೇಂದ್ರವನ್ನು ನಿರ್ಮಿಸಿದ್ದು, ಒಳಾಂಗಣ ಆಟ, ರೆಸ್ಟೋರೆಂಟ್‌, ಜಿಮ್‌,  ಪ್ರಾಥಮಿಕ ಆರೋಗ್ಯ ಕೇಂದ್ರ, ಕಮ್ಯೂನಿಟಿ ಹಾಲ್, ಗ್ರಂಥಾಲಯ, ಈಜುಕೊಳ ನಿರ್ಮಿಸಲಾಗಿದೆ. ಸೂಪರ್ ಮಾರ್ಕೆಟ್‌ಗೆ ಸ್ಥಳಾವಕಾಶ ಅತಿಥಿಗಳಿಗಾಗಿ ನಾಲ್ಕು ಕೊಠಡಿಗಳಿವೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಕಾಶ್‌ ಅವರು ಮಾಹಿತಿ ನೀಡಿದರು.

322 ಒಟ್ಟು ವಿಲ್ಲಾ 170 4ಬಿಎಚ್‌ಕೆ (35ಅಡಿx50 ಅಡಿ) 31 3ಬಿಎಚ್‌ಕೆ (35ಅಡಿx50 ಅಡಿ) 121 4ಬಿಎಚ್‌ಕೆ (30ಅಡಿx50 ಅಡಿ) 320 1ಬಿಎಚ್‌ಕೆ ಇಡಬ್ಲ್ಯುಎಸ್‌ ಫ್ಲ್ಯಾಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.