ADVERTISEMENT

ಹುಳಿಮಾವು: ಸತ್ಯನಾರಾಯಣ ಸ್ವಾಮಿ ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 16:23 IST
Last Updated 10 ಮಾರ್ಚ್ 2025, 16:23 IST
ಸತ್ಯನಾರಾಯಣ ಸ್ವಾಮಿ ಬ್ರಹ್ಮರಥೋತ್ಸವ ಸೋಮವಾರ ನಡೆಯಿತು
ಸತ್ಯನಾರಾಯಣ ಸ್ವಾಮಿ ಬ್ರಹ್ಮರಥೋತ್ಸವ ಸೋಮವಾರ ನಡೆಯಿತು   

ಬೊಮ್ಮನಹಳ್ಳಿ: ಹುಳಿಮಾವುನಲ್ಲಿರುವ ಸತ್ಯ ನಾರಾಯಣಸ್ವಾಮಿ ದೇವಾಲಯದ 20ನೇ ವರ್ಷದ ವಾರ್ಷಿಕೋತ್ಸವ ಹಾಗೂ 19ನೇ ವರ್ಷದ ಬ್ರಹ್ಮರಥೋತ್ಸವವು ಸೋಮವಾರ ವಿಜೃಂಭಣೆಯಿಂದ ನೆರವೇರಿತು.

ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ರಥೋತ್ಸವಕ್ಕೆ ಪೂಜೆ ಸಲ್ಲಿಸಿ, ಚಾಲನೆ ನೀಡಿದರು. ದೇವಸ್ಥಾನದಿಂದ ಕೋದಂಡರಾಮ ದೇವಸ್ಥಾನ ವೃತ್ತದವರೆಗೂ ಭಕ್ತರು ಭಕ್ತಿಭಾವದಿಂದ ತೇರು ಎಳೆದರು. ಬ್ರಹ್ಮರಥೋತ್ಸವಕ್ಕಾಗಿ ಸುತ್ತಮುತ್ತಲ ಪ್ರದೇಶಗಳಿಂದ ಬಂದಿದ್ದ ಜನರು, ಧವನ ಚುಚ್ಚಿದ ಬಾಳೆಹಣ್ಣು ಎಸೆದು ಹರಕೆ ತೀರಿಸಿದರು.

ನಿಶ್ಚಲಾನಂದನಾಥ ಸ್ವಾಮೀಜಿ‌ ಮಾತನಾಡಿ, ‘ಹಬ್ಬ ಹರಿದಿನಗಳ ಆಚರಣೆ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ರಥೋತ್ಸವದ ವೇಳೆಯಲ್ಲಿ ಗರುಡ ರಥದ ಸುತ್ತಲೂ ಪ್ರದಕ್ಷಿಣೆ ಹಾಕುವ ಮೂಲಕ ದೈವ ನೆಲೆಯನ್ನು ಸಾಕ್ಷೀಕರಿಸಿದೆʼ ಎಂದರು.

ADVERTISEMENT

ಸಾಹಿತಿ ಪ್ರೊ.ಕೃಷ್ಣೇಗೌಡ, ಮೇಲುಕೋಟೆ ಶಲ್ವಪಿಳ್ಳೈ ಅಯ್ಯಂಗಾರ್, ವೇಣುಗೋಪಾಲ್ ನೇತೃತ್ವದಲ್ಲಿ ಹಾಸ್ಯಸಂಜೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಹುಲಿ ವೇಷಧಾರಿಗಳು ನೃತ್ಯಕ್ಕೆ ಹೆಜ್ಜೆ ಹಾಕಿ ರಂಜಿಸಿದರು. ಕೇರಳದ ಚಂಡೆ, ಪೂರ್ಣ ಕುಂಭ ಮೇಳದೊಂದಿಗೆ ಸಾಗಿದ ತೇರು, ನೋಡುಗರ ಕಣ್ಮನ ಸೆಳೆದವು. ಮಜ್ಜಿಗೆ, ಪಾನಕ, ಕೋಸಂಬರಿ, ತಂಪು ಪಾನೀಯಗಳು ಸೇರಿದಂತೆ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.