ADVERTISEMENT

ಪತ್ನಿ ಕೊಂದು ಪತಿ ಆತ್ಮಹತ್ಯೆ: ಉಲ್ಲಾಳದ ಪ್ರೆಸ್‌ ಲೇಔಟ್‌ನಲ್ಲಿ ಘಟನೆ

50 ಬಾರಿ ಇರಿದು ಕೃತ್ಯ, ಉಲ್ಲಾಳದ ಪ್ರೆಸ್‌ ಲೇಔಟ್‌ನಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 0:06 IST
Last Updated 30 ಸೆಪ್ಟೆಂಬರ್ 2025, 0:06 IST
 ಕೊಲೆಯದ ಮಂಜು ಹಾಗೂ ಆತ್ಮಹತ್ಯೆ ಮಾಡಿಕೊಂಡ ಧರ್ಮಶೀಲ 
 ಕೊಲೆಯದ ಮಂಜು ಹಾಗೂ ಆತ್ಮಹತ್ಯೆ ಮಾಡಿಕೊಂಡ ಧರ್ಮಶೀಲ    

ಬೆಂಗಳೂರು: ಇಲ್ಲಿನ ಉಲ್ಲಾಳದ ಗೌರ್ನಮೆಂಟ್‌ ಪ್ರೆಸ್‌ ಲೇಔಟ್‌ನಲ್ಲಿ ಪತ್ನಿಗೆ ಇರಿದು ಪತಿಯೂ ಫ್ಯಾನ್‌ಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಜು (28) ಕೊಲೆಯಾದ ಮಹಿಳೆ. ಅವರ ಪತಿ, ತಮಿಳುನಾಡಿನ ಪಿನ್ನಲವಾಡಿ ಗ್ರಾಮದ ಧರ್ಮಶೀಲನ್ ಅವರು ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಜು ಅವರ ತಂದೆ ಪೆರಿಸ್ವಾಮಿ ಅವರು ನೀಡಿದ ದೂರು ಆಧರಿಸಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಜ್ಞಾನಭಾರತಿ ಠಾಣೆಯಲ್ಲಿ ಕೊಲೆ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

ADVERTISEMENT

ಪರಸ್ಪರ ಪ್ರೀತಿಸಿ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ಧರ್ಮಶೀಲನ್ ಮತ್ತು ಮಂಜು ದಂಪತಿಯು ಪ್ರೆಸ್ ಲೇಔಟ್‍ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ದುಬೈನಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಧರ್ಮಶೀಲನ್, ಕೆಲವು ತಿಂಗಳ ಹಿಂದೆ ಬೆಂಗಳೂರಿಗೆ ವಾಪಸ್ ಬಂದಿದ್ದರು. ಪತಿ ದುಬೈಗೆ ಹೋದ ನಂತರ ನಗರದಲ್ಲಿಯೇ ನೆಲಸಿದ್ದ ಮಂಜು ಅವರು ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು.

‘ಧರ್ಮಶೀಲ ಅವರು ದುಬೈನಿಂದ ವಾಪಸ್ ಬಂದು, ಪತ್ನಿಯನ್ನು ತಮಿಳುನಾಡಿನ ಸ್ವಂತ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದರು. ಹದಿನೈದು ದಿನ ತಮಿಳುನಾಡಿನಲ್ಲಿದ್ದು ದಂಪತಿ ಸುತ್ತಾಟ ನಡೆಸಿದ್ದರು. ಮೂರು ದಿನಗಳ ಹಿಂದೆ ಇಬ್ಬರೂ ಬೆಂಗಳೂರಿಗೆ ವಾಪಸ್ ಬಂದಿದ್ದರು. ಭಾನುವಾರ ರಾತ್ರಿ ಕೊಲೆ ಹಾಗೂ ಆತ್ಮಹತ್ಯೆಯ ಘಟನೆ ನಡೆದಿದೆ ಎಂಬುದಾಗಿ ದೂರು ನೀಡಲಾಗಿದೆ. ತನಿಖೆ ನಡೆಯುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಧರ್ಮಶೀಲನ್‌ ಅವರು ದುಬೈನಿಂದ ನಗರಕ್ಕೆ ಬಂದ ಮೇಲೆ ಗಾರೆ ಕೆಲಸ ಮಾಡುತ್ತಿದ್ದರು. ಪ್ರತಿನಿತ್ಯ ಪಾನಮತ್ತರಾಗಿ ಮನೆಗೆ ಬಂದು ಪತ್ನಿಯ ಜತೆ ಜಗಳವಾಡುತ್ತಿದ್ದರು. ಪತ್ನಿ ಕೆಲಸಕ್ಕೆ ಹೋಗುವುದು ಧರ್ಮಶೀಲನ್‍ ಅವರಿಗೆ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಆತ ಪತ್ನಿಯೊಂದಿಗೆ ಪದೇಪದೇ ಜಗಳ ಮಾಡುತ್ತಿದ್ದರು. ಭಾನುವಾರ ರಾತ್ರಿ ದಂಪತಿ ಜಗಳವಾಡಿದ್ದಾರೆ. ಬಳಿಕ ಜಗಳ ವಿಕೋಪಕ್ಕೆ ತಿರುಗಿ, ಧರ್ಮಶೀಲನ್ ಅಡುಗೆ ಕೋಣೆಯಲ್ಲಿದ್ದ ಚಾಕುವಿನಿಂದ ಪತ್ನಿಯ ಕತ್ತು ಕೊಯ್ದು 50ಕ್ಕೂ ಹೆಚ್ಚು ಬಾರಿ ಇರಿದಿದ್ದರು. ಪತ್ನಿಯ ಸಾವಿನ ಬಳಿಕ ಧರ್ಮಶೀಲನ್‌ ಅವರು, ಮನೆಯ ಫ್ಯಾನ್‍ಗೆ ನೇಣು ಹಾಕಿಕೊಂಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬ ಸದಸ್ಯರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.