ADVERTISEMENT

ಪತಿ ಸಾವು: ಮಾಹಿತಿ ತಿಳಿದು ಪತ್ನಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 16:13 IST
Last Updated 7 ಫೆಬ್ರುವರಿ 2026, 16:13 IST
ರಾಜು- ಮೀನಾ 
ರಾಜು- ಮೀನಾ    

ಪ್ರಜಾವಾಣಿ ವಾರ್ತೆ

ಪೀಣ್ಯ ದಾಸರಹಳ್ಳಿ: ನೆಲಮಂಗಲದ ಜಕ್ಕಸಂದ್ರದ ಮನೆಯಲ್ಲಿ ಗ್ಯಾಸ್ ಗೀಸರ್‌ನಿಂದ ಅನಿಲ ಸೋರಿಕೆಯಾಗಿ ಪತಿ ಮೃತಪಟ್ಟ ಮಾಹಿತಿ ತಿಳಿದು, ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ಯಾಸ್ ಗೀಸರ್‌ನಿಂದ ಅನಿಲ ಸೋರಿಕೆಯಾಗಿ ರಾಜು (48) ಅವರು ಮೃತಪಟ್ಟರೆ, ಅವರ ಪತ್ನಿ ಮೀನಾ (42) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ADVERTISEMENT

ತುಮಕೂರು ಜಿಲ್ಲೆಯ ಕುಣಿಗಲ್‌ನ ದಂಪತಿ ಜಕ್ಕಸಂದ್ರದಲ್ಲಿ ನೆಲಸಿದ್ದರು. ಶುಕ್ರವಾರ ಸಂಜೆ ಪತಿ ರಾಜು ಮನೆಯಲ್ಲಿಯೇ ಇದ್ದರು. ಸ್ನಾನ ಮಾಡಲು ಬಾತ್‌ರೂಂಗೆ ತೆರಳಿದ್ದರು. ಒಂದು ಗಂಟೆಯಾದರೂ ಹೊರಕ್ಕೆ ಬಾರದೇ ಇದ್ದಾಗ ಬಾಗಿಲು ಒಡೆದು ಪರಿಶೀಲಿಸಿದಾಗ ಕುಸಿದು ಬಿದ್ದಿರುವುದು ಗೊತ್ತಾಗಿತ್ತು. ಮನೆಯಲ್ಲಿದ್ದ ಪುತ್ರ, ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದ ಮಧ್ಯೆ ರಾಜು ಮೃತಪಟ್ಟಿದ್ದರು ಎಂದು ಪೊಲೀಸರು ಹೇಳಿದರು.

ಮೀನಾ ಅವರು ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಮನೆಯತ್ತ ತೆರಳುವಾಗ ಪತಿ ಮೃತಪಟ್ಟ ಮಾಹಿತಿ ತಿಳಿದು, ಮನೆಯ ಸ್ವಲ್ಪ ದೂರದಲ್ಲಿಯೇ ಇರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

ಮರಣ ಪತ್ರ ಪತ್ತೆ: ‘ನನ್ನ ಪತಿಯನ್ನು ಬಿಟ್ಟು ಒಂದು ನಿಮಿಷವೂ ನಾನು ಬದುಕಿರುವುದಿಲ್ಲ. ಯಾರಿಗೆ ಏನು ಕೊಡಬೇಕೋ ಅದನ್ನು ಕೊಟ್ಟುಬಿಡಿ. ನನ್ನನ್ನು ಕ್ಷಮಿಸಿ’ ಎಂದು ಮೀನಾ ಅವರ ಬರೆದಿಟ್ಟಿರುವ ಮರಣ ಪತ್ರ  ಸಿಕ್ಕಿದೆ ಎಂದು ಮೂಲಗಳು ಹೇಳಿವೆ.

ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.