ADVERTISEMENT

ಪತ್ನಿ ಕಾಟದಿಂದ ನಾಪತ್ತೆ: ಏಳು ವರ್ಷಗಳ ಬಳಿಕ ಪತ್ತೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 18:23 IST
Last Updated 31 ಮಾರ್ಚ್ 2022, 18:23 IST

ಬೆಂಗಳೂರು: ಪತ್ನಿ ಕಾಟದಿಂದ ಬೇಸತ್ತು 2015ರಲ್ಲಿ ಮನೆ ಬಿಟ್ಟು ಹೋಗಿ ನಾಪತ್ತೆಯಾಗಿದ್ದ ಕೋಟೆಪ್ಪ (40) ಎಂಬುವರನ್ನು ಏಳು ವರ್ಷಗಳ ಬಳಿಕ ಆಡುಗೋಡಿ ಪೊಲೀಸರು ಪತ್ತೆ ಮಾಡಿದ್ದಾರೆ.

‘ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕೋಟೆಪ್ಪ, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಹೋದ್ಯೋಗಿಯೂ ಆಗಿದ್ದ ಸವಿತಾ ಎಂಬುವರನ್ನು ಪ್ರೀತಿಸಿ 2012ರಲ್ಲಿ ಮದುವೆಯಾಗಿದ್ದರು. ಆದರೆ, ದಂಪತಿ ನಡುವೆ ಕಲಹ ಶುರುವಾಗಿತ್ತು. ಬೇಸತ್ತ ಕೋಟೆಪ್ಪ, 2015ರಲ್ಲಿ ಮನೆ ಬಿಟ್ಟು ಹೋಗಿದ್ದರು. ನಾಪತ್ತೆಯಾಗಿರುವ ಪತಿಯನ್ನು ಹುಡುಕಿಕೊಡುವಂತೆ ಸವಿತಾ ಠಾಣೆಗೆ ದೂರು ನೀಡಿದ್ದರು’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

‘ಒಡಿಶಾಗೆ ಹೋಗಿದ್ದ ಕೋಟೆಪ್ಪ, ಅಲ್ಲಿಯೇ ಉಳಿದುಕೊಂಡಿದ್ದರು. ಕೆಲ ತಿಂಗಳ ಹಿಂದಷ್ಟೇ ತಮ್ಮೂರಾದ ಹರಿಹರಕ್ಕೆ ಬಂದಿದ್ದರು. ಇದು ಗೊತ್ತಾಗುತ್ತಿದ್ದಂತೆ ಪತಿ ಸವಿತಾ, ಠಾಣೆಗೆ ಮಾಹಿತಿ ನೀಡಿದ್ದರು. ಹರಿಹರಕ್ಕೆ ಹೋಗಿ ಕೋಟೆಪ್ಪ ಅವರನ್ನು ಠಾಣೆಗೆ ಕರೆತರಲಾಗಿದೆ’ ಎಂದೂ ತಿಳಿಸಿವೆ.

ADVERTISEMENT

‘ಪತ್ನಿ ಕಿರುಕುಳದಿಂದ ಮನೆ ಬಿಟ್ಟು ಹೋಗಿದ್ದಾಗಿ ಕೋಟೆಪ್ಪ ಹೇಳಿಕೆ ನೀಡಿದ್ದಾರೆ. ‘ಪತ್ನಿ ಜೊತೆ ಸಂಸಾರ ಮಾಡುವುದಿಲ್ಲ’ ಎಂದೂ ಪಟ್ಟು ಹಿಡಿದಿದ್ದಾರೆ. ಹೀಗಾಗಿ, ದಂಪತಿ ನಡುವೆ ಕಾನೂನು ಪ್ರಕಾರ ಸಂಧಾನ ನಡೆಸಲು ಕ್ರಮ ಕೈಗೊಳ್ಳಲಾಗಿದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.