
ಬೆಂಗಳೂರು: ಪತ್ನಿಯ ಮೊಬೈಲ್‌ನಲ್ಲಿ ರಹಸ್ಯವಾಗಿ ಆ್ಯಪ್ ಅಳವಡಿಸಿ ಅವರ ಪ್ರತಿ ಚಲನವಲನ ಪತ್ತೆ ಹಚ್ಚುತ್ತಿದ್ದ ಪತಿ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುಟ್ಟೇನಹಳ್ಳಿಯ ಬಿ.ಜಿ ರಸ್ತೆಯ ವೈದ್ಯೆ ಡಾ.ಆರ್ಯ ಶಾರದಾ (28) ಎಂಬುವವರು ನೀಡಿದ ದೂರು ಆಧರಿಸಿ ಅವರ ಪತಿ ಅಮಲ್ ವಿ. ನಾಯರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಆರ್ಯ ಶಾರದಾ ಹಾಗೂ ಅಮಲ್ ವಿ. ನಾಯರ್ ದಂಪತಿ, 2025ರ ಆ.1ರಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ದಂಪತಿಗೆ ಒಂದು ಮಗುವಿದ್ದು, ಮಗು ಯಾರ ಬಳಿ ಇರಬೇಕೆಂಬ ಪ್ರಕರಣವು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಈ ನಡುವೆ ವಾರಕ್ಕೊಮ್ಮೆ ಮಗುವನ್ನು ನೋಡಲು ನ್ಯಾಯಾಲಯವು ಅಮಲ್ ಅವರಿಗೆ ಅವಕಾಶ ನೀಡಿದೆ. ಮಗುವನ್ನು ನೋಡಲು ಬರುವ ವೇಳೆ ಅಮಲ್ ಅವರು ಪತ್ನಿಗೆ ತಿಳಿಯದಂತೆ ಮೊಬೈಲ್‌ನಲ್ಲಿ ಆ್ಯಪ್‌ವೊಂದನ್ನು ಇನ್‌ಸ್ಟಾಲ್ ಮಾಡಿದ್ದರು. ಪತ್ನಿ ಎಲ್ಲಿ ಹೋಗುತ್ತಾರೆ? ಯಾರ ಜೊತೆಯಲ್ಲಿ ಮಾತನಾಡುತ್ತಾರೆ ಎಂಬುದರ ಮಾಹಿತಿ ಪಡೆದುಕೊಳ್ಳುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
2025ರ ನ.22ರಂದು ಆರ್ಯ ಶಾರದಾ ಅವರ ಮೊಬೈಲ್‌ನಲ್ಲಿ ದೋಷ ಕಾಣಿಸಿಕೊಂಡಿತ್ತು. ಆ್ಯಪ್‌ವೊಂದು ಪದೇ ಪದೇ ಅಪ್‌ಡೇಟ್ ಕೇಳುತ್ತಿತ್ತು. ಪರಿಶೀಲನೆ ನಡೆಸಿದಾಗ, ಆ್ಯಪ್‌ವೊಂದು ಅಳವಡಿಕೆ ಆಗಿರುವುದು ಅವರ ಅರಿವಿಗೆ ಬಂದಿತ್ತು. ಅವರು ಅದೇ ದಿನ ಅನ್ ಇನ್‌ಸ್ಟಾಲ್ ಮಾಡಿದ್ದರು. ನಂತರ, ಠಾಣೆಗೆ ದೂರು ನೀಡಿದ್ದಾರೆ. ಇದೀಗ ಪುಟ್ಟೇನಹಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.