ADVERTISEMENT

ಪತಿ ಸೇರಿ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 19:38 IST
Last Updated 29 ಫೆಬ್ರುವರಿ 2020, 19:38 IST

ಬೆಂಗಳೂರು: ಸಿನಿಮಾ ಹಿನ್ನೆಲೆ ಗಾಯಕಿ ಎಚ್.ಎಸ್‌. ಸುಷ್ಮಿತಾ (26) ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ 12 ದಿನಗಳ ಬಳಿಕ ಆರೋಪಿಗಳಾದ ಸುಷ್ಮಿತಾ ಪತಿ, ದೊಡ್ಡಮ್ಮ ಮತ್ತು ಸಹೋದರಿಯನ್ನು ಬಂಧಿಸುವಲ್ಲಿ ಅನ್ನಪೂರ್ಣೇಶ್ವರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ನಾಗರಬಾವಿಯಲ್ಲಿರುವ ತನ್ನ ತಾಯಿ ಮನೆಯಲ್ಲಿ ಫೆ. 17ರಂದು ಸುಷ್ಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿ ಶರತ್‌ಕುಮಾರ್‌, ಆತನ ದೊಡ್ಡಮ್ಮ ವೈದೇಹಿ ಮತ್ತು ಸಹೋದರಿ ಗೀತಾ ಬಂಧಿತರು.

ಆತ್ಮಹತ್ಯೆಗೂ ಮುನ್ನ ತಾಯಿ ಹಾಗೂ ತಮ್ಮನ ವಾಟ್ಸ್‌ಆ್ಯಪ್‌ಗೆ ಸಂದೇಶ ಕಳುಹಿಸಿದ್ದ ಸುಷ್ಮಿತಾ, ‘ನನಗೆ ಅವರು (ಪತಿ ಶರತ್‌ಕುಮಾರ್) ದೊಡ್ಡಮ್ಮನ ಮಾತು ಕೇಳಿಕೊಂಡು ಚಿತ್ರಹಿಂಸೆ ಕೊಡುತ್ತಿದ್ದಾರೆ. ಅವರನ್ನು (ಪತಿ, ಆತನ ಕುಟುಂಬದವರನ್ನು) ಮಾತ್ರ ಸುಮ್ಮನೇ ಬಿಡಬೇಡಿ. ಬಿಟ್ಟರೆ, ನನ್ನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ’ ಎಂದು ಬರೆದಿದ್ದರು.

ADVERTISEMENT

‘ಸುಷ್ಮಿತಾ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೆ ಆರೋಪಿಗಳು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಸಂಬಂಧಿಕರ ಮನೆಯಲ್ಲಿ ಅಡಗಿಕೊಂಡಿದ್ದರು. ಫೆ. 17ರ ನಂತರ ಈ ಮೂರೂ ಮಂದಿ ಮೊಬೈಲ್‌ ಬಳಸಿಲ್ಲ. ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿದ್ದರು. ಹೀಗಾಗಿ ಅವರು ತಲೆಮರೆಸಿಕೊಂಡಿದ್ದ ಸ್ಥಳ ಗುರುತಿಸಲು ಸಾಧ್ಯವಾಗಿರಲಿಲ್ಲ’ ಎಂದು ಪ್ರಕರಣ ತನಿಖಾಧಿಕಾರಿ ತಿಳಿಸಿದರು.

‘ಶರತ್‌ಕುಮಾರನ ಸಂಬಂಧಿಕರೊಬ್ಬರ ನೆರವು ಪಡೆದು ಆತನ ಎಲ್ಲ ಸಂಬಂಧಿಕರ ಮಾಹಿತಿ ಸಂಗ್ರಹಿಸಿದಾಗ ಆರೋಪಿಗಳು ಪಾಂಡಪುರದಲ್ಲಿ ತಲೆಮರೆಸಿಕೊಂಡಿರುವ ವಿಷಯ ಗೊತ್ತಾಯಿತು. ಪೊಲೀಸರ ತಂಡ ಶನಿವಾರ ಬೆಳಿಗ್ಗೆ 10.45ಕ್ಕೆ ಆರೋಪಿಗಳು ವಶಕ್ಕೆ ಪಡೆದುಕೊಂಡಿತು’ ಎಂದು ಅವರು ಹೇಳಿದರು.

‘ವರದಕ್ಷಿಣೆ ನೀಡಬೇಕೆಂಬ ತನ್ನ ಬೇಡಿಕೆ ಈಡೇರಿಸದ ಕಾರಣಕ್ಕೆ ಆಕೆಯ ಜೊತೆ ಶರತ್‌ಕುಮಾರ್‌ ದೈಹಿಕ ಸಂಪರ್ಕ ಕೂಡಾ ಮಾಡುತ್ತಿರಲಿಲ್ಲ. ತನ್ನೆಲ್ಲ ಸಂಪಾದನೆಯನ್ನು ಆಕೆ ಅವನಿಗೆ ನೀಡುತ್ತಿದ್ದಳು. ಆದರೆ, ಇನ್ನಷ್ಟು ಹಣ ತರುವಂತೆ ಶರತ್‌ ಪೀಡಿಸುತ್ತಿದ್ದ. ಹಲವು ಬಾರಿ ಮಧ್ಯರಾತ್ರಿಯಲ್ಲೇ ಮನೆಯಿಂದ ಆಕೆಯನ್ನು ಹೊರಹಾಕಿದ್ದ. ಬಂಧಿತರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು. ಸುಷ್ಮಿತಾಳ ಮರಣಪತ್ರ ಈ ಪ್ರಕರಣದಲ್ಲಿ ಮಹತ್ವದ ಸಾಕ್ಷ್ಯ’ ಎಂದರು.

ವಾಹನ ತಯಾರಿಕಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶರತ್‌ಕುಮಾರ್‌ ಹಾಗೂ ಚನ್ನರಾಯನಪಟ್ಟಣದ ಸುಷ್ಮಿತಾ ಅವರಿಗೆ 2018ರಲ್ಲಿ ಮದುವೆ ಆಗಿತ್ತು. ಬಳಿಕ ದಂಪತಿ, ಕುಮಾರಸ್ವಾಮಿ ಲೇಔಟ್‌ನ ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲ್ಯಾಟೊಂದರಲ್ಲಿ ನೆಲೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.