ADVERTISEMENT

ಬೆಂಗಳೂರು | ಬೆತ್ತಲುಗೊಳಿಸಿ ಪತ್ನಿ ಹತ್ಯೆ: ಪತಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2023, 15:49 IST
Last Updated 16 ಡಿಸೆಂಬರ್ 2023, 15:49 IST
<div class="paragraphs"><p><strong>ಸಾಂದರ್ಭಿಕ ಚಿತ್ರ</strong></p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಪತ್ನಿಯನ್ನು ಬೆತ್ತಲುಗೊಳಿಸಿ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದ ಆಕೆಯ ಪತಿ ಚುನ್ನು ಹನ್ಸದ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 9ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.

ಒಡಿಶಾದ ಮಯೂರ್‌ಬಂಜ್ ಜಿಲ್ಲೆಯ ಚುನ್ನು ಹನ್ಸದ್ ಶಿಕ್ಷೆಗೆ ಗುರಿಯಾದ ಅಪರಾಧಿ. ಹೊಸಕೋಟೆ ಠಾಣೆ ವ್ಯಾಪ್ತಿಯಲ್ಲಿ 2020ರ ಜುಲೈ 22ರಂದು ನಡೆದಿದ್ದ ಕೊಲೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರಾದ ಎಸ್. ಶ್ರೀಧರ್ ಅವರು ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾದ ರಾಜ ಹಾಗೂ ಮಹಾದೇವ ಗಡದ ಪ್ರಕರಣದಲ್ಲಿ ವಾದ ಮಂಡಿಸಿದ್ದರು.

ADVERTISEMENT

‘ಚುನ್ನು ಹನ್ಸದ್ ವಿರುದ್ಧ ದಾಖಲಾಗಿದ್ದ ಕೊಲೆ (ಐಪಿಸಿ 302) ಪ್ರಕರಣದಲ್ಲಿ ನ್ಯಾಯಾಲಯ, ಪುರಾವೆಗಳು ಹಾಗೂ ಸಾಕ್ಷಿದಾರರ ವಿಚಾರಣೆ ನಡೆಸಿತ್ತು. ಚುನ್ನು ಅಪರಾಧಿ ಎಂಬುದು ಸಾಬೀತಾಗಿದ್ದರಿಂದ ನ್ಯಾಯಾಲಯ, ಜೀವಾವಧಿ ಶಿಕ್ಷೆ ಹಾಗೂ ₹ 25 ಸಾವಿರ ದಂಡ ವಿಧಿಸಿದೆ’ ಎಂದು ಮಹಾದೇವ ಗಡದ ತಿಳಿಸಿದ್ದಾರೆ.

ಕೆಲಸಕ್ಕೆ ಬಂದಿದ್ದ ದಂಪತಿ: ಚುನ್ನು ಹನ್ಸದ್, ತಮ್ಮೂರಿನ 25 ವರ್ಷದ ಮಹಿಳೆಯನ್ನು ಎರಡನೇ ಮದುವೆಯಾಗಿದ್ದ. ಮಹಿಳೆಗೂ ಅದು ಎರಡನೇ ಮದುವೆಯಾಗಿತ್ತು. ಕೆಲಸ ಹುಡುಕಿಕೊಂಡು ಇಬ್ಬರೂ ಬೆಂಗಳೂರಿಗೆ ಬಂದು ದೊಡ್ಡ ಹುಲ್ಲೂರು ಗ್ರಾಮದಲ್ಲಿ ನೆಲೆಸಿದ್ದರು. ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದರು.

ಶೀಲದ ಬಗ್ಗೆ ಶಂಕಿಸಿ ಹತ್ಯೆ: ಕಾರ್ಮಿಕರ ಶೆಡ್‌ನಲ್ಲಿ ದಂಪತಿ ವಾಸವಿದ್ದರು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿ ಯುವಕರ ಜೊತೆ ಪತ್ನಿ ಮಾತನಾಡುತ್ತಿದ್ದರು. ಇದನ್ನು ನೋಡಿದ್ದ ಚುನ್ನು ಹನ್ಸದ್, ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ಜಗಳ ಮಾಡಲಾರಂಭಿಸಿದ್ದ.

2020ರ ಜುಲೈ 22ರಂದು ರಾತ್ರಿ ದಂಪತಿ ನಡುವೆ ಏಕಾಏಕಿ ಜಗಳ ಶುರುವಾಗಿತ್ತು. ಪತ್ನಿ ಮೇಲೆ ಹಲ್ಲೆ ಮಾಡಿದ್ದ ಚುನ್ನು ಹನ್ಸದ್, ಬಟ್ಟೆಗಳನ್ನು ಬಿಚ್ಚಿ ಬೆತ್ತಲು ಮಾಡಿದ್ದ. ನಂತರ, ಎದೆ ಹಾಗೂ ದೇಹದ ಹಲವು ಭಾಗಗಳಿಗೆ ಹಲ್ಲಿನಿಂದ ಕಚ್ಚಿ ರಕ್ತ ಸೋರುವಂತೆ ಗಾಯಗೊಳಿಸಿದ್ದ. ಬಳಿಕ, ಪತ್ನಿಯ ಕತ್ತು ಹಿಸುಕಿ ಕೊಂದಿದ್ದ. ನಂತರ, ಶೆಡ್ ಛಾವಣಿಯಲ್ಲಿದ್ದ ಗಾಜು ಒಡೆದು, ಕಿಂಡಿ ಮಾಡಿಕೊಂಡು ಸ್ಥಳದಿಂದ ಪರಾರಿಯಾಗಿದ್ದ.

ಕೊಲೆ ಸಂಬಂಧ ಮಹಿಳೆಯ ಸಹೋದರಿ ಹೊಸಕೋಟೆ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಅಂದಿನ ಇನ್‌ಸ್ಪೆಕ್ಟರ್ ವಿ.ಡಿ. ಶಿವರಾಜು ಅವರು ಚನ್ನು ಹನ್ಸದ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.