ADVERTISEMENT

‘ಬೇಡಿ ಏಕೆ ಹಾಕಿರಲಿಲ್ಲ ?’

ಎನ್‌ಕೌಂಟರ್‌ ಕುರಿತ ವಿಚಾರ ಸಂಕಿರಣದಲ್ಲಿ ನಿವೃತ್ತ ಡಿಜಿಪಿ ಶ್ರೀಕುಮಾರ್

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 20:22 IST
Last Updated 21 ಡಿಸೆಂಬರ್ 2019, 20:22 IST
ವಿಚಾರ ಸಂಕಿರಣ ಆರಂಭಕ್ಕೂ ಮುನ್ನ ಅಜಯ್‌ಕುಮಾರ್‌ ಸಿಂಗ್‌, ಸಿಎಚ್‌ಆರ್‌ಐ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಕೆ. ಚಂದ್ರಶೇಖರ್, ಶ್ರೀಕುಮಾರ್‌, ರೂಪಕ್‌ ಕುಮಾರ್‌ ದತ್ತಾ ಹಾಗೂ ಎಸ್‌.ಟಿ. ರಮೇಶ್‌ ಮಾತುಕತೆಯಲ್ಲಿ ತೊಡಗಿದ್ದ ಕ್ಷಣ -–ಪ್ರಜಾವಾಣಿ ಚಿತ್ರ
ವಿಚಾರ ಸಂಕಿರಣ ಆರಂಭಕ್ಕೂ ಮುನ್ನ ಅಜಯ್‌ಕುಮಾರ್‌ ಸಿಂಗ್‌, ಸಿಎಚ್‌ಆರ್‌ಐ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಕೆ. ಚಂದ್ರಶೇಖರ್, ಶ್ರೀಕುಮಾರ್‌, ರೂಪಕ್‌ ಕುಮಾರ್‌ ದತ್ತಾ ಹಾಗೂ ಎಸ್‌.ಟಿ. ರಮೇಶ್‌ ಮಾತುಕತೆಯಲ್ಲಿ ತೊಡಗಿದ್ದ ಕ್ಷಣ -–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಹೈದರಾಬಾದ್‌ನ ಪಶುವೈದ್ಯೆ ಅತ್ಯಾಚಾರ, ಹತ್ಯೆ ಪ್ರಕರಣದ ಆರೋಪಿಗಳನ್ನು ಘಟನೆ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ, ಪೊಲೀಸರು ಅವರ ಕೈಗಳಿಗೆ ಬೇಡಿ ಏಕೆ ಹಾಕಿರಲಿಲ್ಲ’ ಎಂದು ನಿವೃತ್ತ ಡಿಜಿಪಿ ಶ್ರೀಕುಮಾರ್‌ ಪ್ರಶ್ನಿಸಿದರು.

‘ಎನ್‌ಕೌಂಟರ್‌ ಮತ್ತು ಪೊಲೀಸ್‌ ಸುಧಾರಣೆ’ ಕುರಿತು ಕಾಮನ್‌ವೆಲ್ತ್‌ ಹ್ಯೂಮನ್‌ ರೈಟ್ಸ್‌ ಇನಿಷಿಯೇಟಿವ್‌ (ಸಿಎಚ್‌ಆರ್‌ಐ) ಸಂಸ್ಥೆ ಆಶ್ರಯದಲ್ಲಿ ನಗರದಲ್ಲಿ ಶನಿವಾರ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಯಾವುದೇ ಅಪರಾಧ ಮಾಡಿದ್ದರೂ ಹೊರಗಡೆ ಕರೆದುಕೊಂಡು ಹೋಗು
ವಾಗ ಬೇಡಿ ಹಾಕುತ್ತಾರೆ. ಪೊಲೀಸರು ಅವರ ಕೈಗೆ ಬೇಡಿ ಹಾಕಿದ್ದರೆ ಎನ್‌ಕೌಂಟರ್‌ ನಡೆಯಲು ಸಾಧ್ಯವಿರ
ಲಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಘಟನೆಯ ಬಗ್ಗೆ ಆ ಸ್ಥಳದಲ್ಲಿಯೇ ವಿವರಣೆ ಪಡೆಯುವ ಉದ್ದೇಶವಿದ್ದರೆ,ನಾಲ್ವರೂ ಆರೋಪಿಗಳನ್ನೂ ಕರೆದುಕೊಂಡು ಹೋಗುವ ಅವಶ್ಯಕತೆ ಇರಲಿಲ್ಲ. ಒಬ್ಬ ಆರೋಪಿಯನ್ನು ಕರೆದೊಯ್ಯಬಹುದಿತ್ತು’ ಎಂದರು.

ADVERTISEMENT

‘ಎನ್‌ಕೌಂಟರ್‌ ನಂತರ ಹಲವು ಜನ ಆ ಪೊಲೀಸರಿಗೆ ರಾಖಿ ಕಟ್ಟಿದರು. ಸಿಹಿ ಹಚ್ಚಿ ಸಂಭ್ರಮಿಸಿದರು. ಮಾಧ್ಯಮಗಳು ಕೂಡ ಗುಂಡಿನ ಮೂಲಕ ನ್ಯಾಯದಾನ ಎಂದು ಬರೆದವು. ದೇಶದಲ್ಲಿ ಅಪರಾಧ ನ್ಯಾಯದಾನ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಜನರಿಗೆ ಈಗ ತ್ವರಿತ ನ್ಯಾಯದಾನ (ಇನ್‌ಸ್ಟಂಟ್‌ ಜಸ್ಟೀಸ್‌) ಹೆಚ್ಚು ಆಪ್ತವಾಗಿ ತೋರುತ್ತಿದೆ. ಈಗಿನ ನ್ಯಾಯದಾನ ವಿಳಂಬವಾಗುತ್ತಿರುವುದೂ ಇದಕ್ಕೆ ಕಾರಣ’ ಎಂದರು.

‘ಪೊಲೀಸ್‌ ವ್ಯವಸ್ಥೆ ಸುಧಾರಿಸಲು ಇಡೀ ರಾಜ್ಯವನ್ನು ಒಂದು ಠಾಣೆಯಾಗಿ ಘೋಷಿಸಬೇಕು. ಅಂದರೆ, ಯಾವುದೇ ವ್ಯಾಪ್ತಿ ಇರಬಾರದು. ಎಲ್ಲ ಪ್ರಕರಣಗಳನ್ನು ಕಡ್ಡಾಯವಾಗಿ ದಾಖಲಿಸಿಕೊಳ್ಳಬೇಕು. ಕಾನೂನಿನ ಆಡಳಿತ ಮುಖ್ಯವಾಗಬೇಕು ಮತ್ತು ತಂತ್ರಜ್ಞಾನದ ಬಳಕೆ ಹೆಚ್ಚಬೇಕು. ಪೊಲೀಸರು ಕರ್ತವ್ಯ ನಿರ್ವಹಣೆಯಲ್ಲಿದ್ದಾಗ ಅವರ ಸಮವಸ್ತ್ರದ ಮೇಲೆ ಕ್ಯಾಮೆರಾ ಅಳವಡಿಸುವಂತಾಗಬೇಕು.
ಆಗ, ಇಂತಹ ಎನ್‌ಕೌಂಟರ್‌ಗಳ ಬಗ್ಗೆಅನುಮಾನಗಳು ಇರುವುದಿಲ್ಲ’ ಎಂದರು.

ವಿಮರ್ಶಕಿ ಎಂ.ಎನ್. ಆಶಾದೇವಿ, ‘ಅತ್ಯಾಚಾರ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಲಾಗಿದೆಎಂಬ ಸುದ್ದಿ ತಿಳಿದಾಗ ಆ ಕ್ಷಣಕ್ಕೆ ಸಮಾಧಾನವಾಯಿತು. ಆದರೆ, ಅದೇ ಆರೋಪಿಗಳು ಬಲಿಷ್ಠರಾಗಿದ್ದರೆ, ಮೇಲ್ಜಾತಿಗೆ ಸೇರಿದ್ದರೆ ಇಂತಹ ಎನ್‌ಕೌಂಟರ್‌ ಆಗುತ್ತಿತ್ತೇ ಎಂಬ ಪ್ರಶ್ನೆಯೂ ಉದ್ಭವಿಸಿತು’ ಎಂದರು.

‘ಈ ಪ್ರಕರಣದಲ್ಲಿನ ಆರೋಪಿಗಳ ಶಿಕ್ಷೆಗೆ ಒತ್ತಾಯಿಸಿದ ಮಾದರಿಯಲ್ಲಿಯೇ, ಧರ್ಮಸ್ಥಳ ಹಾಗೂ ವಿಜಯಪುರದಲ್ಲಿ ನಡೆದ ಯುವತಿಯರ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗಳ ಶಿಕ್ಷೆಗೆ ಏಕೆ ಒತ್ತಾಯಿಸಲಿಲ್ಲ’ ಎಂದು ಅವರು ಪ್ರಶ್ನಿಸಿದರು.

ನಿವೃತ್ತ ಡಿಜಿಪಿ ಅಜಯ್‌ಕುಮಾರ್‌ ಸಿಂಗ್‌, ‘ಕಾನೂನಿನಲ್ಲಿ ಆತ್ಮರಕ್ಷಣೆಗೆ ಅಥವಾ ಆರೋಪಿಗಳು ತಪ್ಪಿಸಿಕೊಳ್ಳುವಸಂದರ್ಭದಲ್ಲಿ ಬಲವಾದ ಶಕ್ತಿಪ್ರದರ್ಶನಕ್ಕೆ ಅಥವಾ ಶಕ್ತಿಯನ್ನು ಬಲವಾಗಿ ಪ್ರಯೋಗಿಸುವುದಕ್ಕೆ ಅವಕಾಶವಿದೆ. ಆದರೆ, ಆರೋಪಿ ತಪ್ಪಿಸಿಕೊಳ್ಳುತ್ತಿದ್ದ ಎಂಬುದು ನಿಜವಾಗಿದ್ದರೆ, ಅದಕ್ಕೆ ಆ ಪೊಲೀಸ್‌ ಅಧಿಕಾರಿಯ ನಿರ್ಲಕ್ಷ್ಯವೂ ಕಾರಣವಾಗಿರುತ್ತದೆ. ಆ ಅಧಿಕಾರಿಯ ವಿರುದ್ಧವೂ ಪ್ರಕರಣ ದಾಖಲಿಸಬೇಕಾಗುತ್ತದೆ’ ಎಂದರು.

‘ಸೌಲಭ್ಯವಿಲ್ಲದೆ ಸಬಲವಾಗುವುದು ಹೇಗೆ ?’

‘ಯಾವುದೇ ಪ್ರಕರಣದಲ್ಲಿ ಪೊಲೀಸ್‌ ವ್ಯವಸ್ಥೆಯ ಬಗ್ಗೆ, ಪೊಲೀಸರ ವೈಫಲ್ಯದ ಬಗ್ಗೆ ಚರ್ಚೆಯಾಗುತ್ತದೆ. ಆದರೆ, ಪೊಲೀಸರಿಗೆ ಅಗತ್ಯವಾದ ಸೌಲಭ್ಯಗಳಿವೆಯೇ, ಅಗತ್ಯವಿರುವಷ್ಟು ಸಿಬ್ಬಂದಿ ಇದ್ದಾರಾ ಎಂದು ಯಾರೂ ಯೋಚಿಸುವುದಿಲ್ಲ’ ಎಂದು ನಿವೃತ್ತ ಡಿಜಿಪಿ ಎಸ್.ಟಿ. ರಮೇಶ್‌ ಹೇಳಿದರು.

‘ರಾಜ್ಯದಲ್ಲಿ ಜನಸಂಖ್ಯೆ ಮತ್ತು ಪೊಲೀಸ್‌ ಅನುಪಾತ, ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ. ರಾಜ್ಯದಲ್ಲಿ ಪ್ರತಿಲಕ್ಷ ಜನರಿಗೆ 158 ಪೊಲೀಸರಿದ್ದಾರೆ. ದೇಶದಲ್ಲಿ ಈ ಸಂಖ್ಯೆ 222 ಇದೆ. ಅರ್ಜೆಂಟಿನಾದಂತಹ ರಾಷ್ಟ್ರಗಳಲ್ಲಿ ಲಕ್ಷ ಜನರಿಗೆ 800 ಪೊಲೀಸರು ಇದ್ದಾರೆ’ ಎಂದರು.

‘ಮಹಿಳಾ ಕೈದಿಗಳನ್ನು ಬಂಧಿಸುವ ಸಂದರ್ಭದಲ್ಲಿ ಮಹಿಳಾ ಕಾನ್‌ಸ್ಟೆಬಲ್‌ಗಳು ಏಕೆ ಬಂದಿಲ್ಲ ಎಂದು ಪ್ರಶ್ನಿಸಲಾಗುತ್ತದೆ. ಅವರು ಇದ್ದರೆ ತಾನೇ ಬರುವುದು’ ಎಂದರು.

‘ದೇಶದಲ್ಲಿ 360 ಠಾಣೆಗಳಲ್ಲಿ ವಾಹನಗಳಿಲ್ಲ. 999 ಠಾಣೆಗಳಲ್ಲಿ ಟೆಲಿಫೋನ್‌ ಸೌಲಭ್ಯವಿಲ್ಲ. ಒಂದೊಂದು ಠಾಣೆಗಳಲ್ಲಿ ವರ್ಷಕ್ಕೆ 800ರಿಂದ 900 ಪ್ರಕರಣ ದಾಖಲಾಗುತ್ತಿವೆ. ಸಿಬ್ಬಂದಿ ಕೊರತೆ ನಡುವೆ ನಡೆಯುವ ಪ್ರಕರಣಗಳ ತನಿಖೆಯ ಗುಣಮಟ್ಟ ಇನ್ನು ಹೇಗಿರುತ್ತದೆ ಯೋಚಿಸಿ’ ಎಂದರು.

‘ನಮ್ಮ ವ್ಯವಸ್ಥೆಯಲ್ಲಿ ನೀತಿ ಸಾಕಷ್ಟಿದೆ. ಆದರೆ, ನ್ಯಾಯ ಮಾತ್ರ ತೀರಾ ಕಡಿಮೆ’ ಎಂದರು.

ಸಂವಿಧಾನದಲ್ಲಿನ ಎಲ್ಲ ಹಕ್ಕುಗಳಿಗಿಂತ ಜೀವಿಸುವ ಹಕ್ಕು ಅತಿ ಮುಖ್ಯವಾದುದು. ಜೀವವೇ ಹೋದ ಮೇಲೆ ಉಳಿದ ಹಕ್ಕುಗಳು ಇದ್ದರೇನು ಪ್ರಯೋಜನ?.

- ರೂಪಕ್‌ ಕುಮಾರ್‌ ದತ್ತ, ನಿವೃತ್ತ ಡಿಜಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.