ADVERTISEMENT

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಿಂದ ಶಿಶು, ತಾಯಂದಿರ ಮರಣ ಇಳಿಮುಖ: ಸಿದ್ದರಾಮಯ್ಯ

ಐಸಿಡಿಎಸ್‌ ಸುವರ್ಣ ಮಹೋತ್ಸವದಲ್ಲಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 15:34 IST
Last Updated 28 ನವೆಂಬರ್ 2025, 15:34 IST
ಬೆಂಗಳೂರಿನಲ್ಲಿ ನಡೆದ ಐಸಿಡಿಎಸ್‌ ಸುವರ್ಣ ಮಹೋತ್ಸವದಲ್ಲಿ ಸಿದ್ದರಾಮಯ್ಯ ಅವರು ರಿಮೋಟ್ ಬಟನ್ ಒತ್ತುವ ಮೂಲಕ ‘ಅಕ್ಕ ಪಡೆ’ಗೆ ಚಾಲನೆ ನೀಡಿದರು. ಮೋಟಮ್ಮ, ಮಾರ್ಗರೇಟ್ ಆಳ್ವ,  ಡಿ.ಕೆ. ಶಿವಕುಮಾರ್, ಲಕ್ಷ್ಮಿ ಹೆಬ್ಬಾಳಕರ್‌, ಎಚ್.ಸಿ. ಮಹದೇವಪ್ಪ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ನಡೆದ ಐಸಿಡಿಎಸ್‌ ಸುವರ್ಣ ಮಹೋತ್ಸವದಲ್ಲಿ ಸಿದ್ದರಾಮಯ್ಯ ಅವರು ರಿಮೋಟ್ ಬಟನ್ ಒತ್ತುವ ಮೂಲಕ ‘ಅಕ್ಕ ಪಡೆ’ಗೆ ಚಾಲನೆ ನೀಡಿದರು. ಮೋಟಮ್ಮ, ಮಾರ್ಗರೇಟ್ ಆಳ್ವ,  ಡಿ.ಕೆ. ಶಿವಕುಮಾರ್, ಲಕ್ಷ್ಮಿ ಹೆಬ್ಬಾಳಕರ್‌, ಎಚ್.ಸಿ. ಮಹದೇವಪ್ಪ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್‌) ಕಾರ್ಯಕ್ರಮಗಳಿಂದ ಶಿಶು, ತಾಯಂದಿರ ಮರಣ ಹಾಗೂ ಅಪೌಷ್ಟಿಕತೆ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿದೆ. 69,922 ಅಂಗನವಾಡಿ ಕೇಂದ್ರಗಳಿಂದ 40 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳಿಗೆ ಅನುಕೂಲವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶುಕ್ರವಾರ ನಡೆದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸುವರ್ಣ ಮಹೋತ್ಸವ, ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಯೋಜನೆಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

70ರ ದಶಕದಲ್ಲಿ ಮಹಿಳೆ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ, ಶಿಶು ಮತ್ತು ತಾಯಿ ಮರಣ ಹೆಚ್ಚಿದ ಸಂದರ್ಭದಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಈ ಕಾರ್ಯಕ್ರಮ ಜಾರಿಗೊಳಿಸಿದರು. ಟಿ.ನರಸೀಪುರ ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಮೊದಲು ಪ್ರಾರಂಭಗೊಂಡ ಅಂಗನವಾಡಿ ಕೇಂದ್ರ, 33 ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸಿತು. ಪ್ರಸ್ತುತ 69 ಸಾವಿರಕ್ಕೂ ಅಧಿಕ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ADVERTISEMENT

ಮಹಿಳೆಯರಲ್ಲಿ ಶೇಕಡ ನೂರರಷ್ಟು ಸಾಕ್ಷರತೆ, ವೈಚಾರಿಕ ಹಾಗೂ ವೈಜ್ಞಾನಿಕ ಜ್ಞಾನ ಬರಬೇಕಿದೆ. ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸ್ವಾವಲಂಬಿಗಳಾಗದೆ ಹೋದರೆ, ಸಮಾಜ ಮುಂದುವರಿಯುವುದು ಕಷ್ಟ ಎಂದರು. 

ರಾಜ್ಯದ ಒಟ್ಟು 5,000 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೇಂದ್ರಗಳಲ್ಲಿ ಪ್ರಾರಂಭಿಸಲಾಗುವುದು ಎಂದರು.

ಇದಕ್ಕೂ ಮುನ್ನ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌, ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನವನ್ನು ಒಂದು ಸಾವಿರ ರೂಪಾಯಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗೆ ಮನವಿ ಮಾಡಿದರು.

ಇದೇ ವೇಳೆ ಮಕ್ಕಳಿಗೆ ಶೌರ್ಯ ಪ್ರಶಸ್ತಿ, ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ಹಾಗೂ ವ್ಯಕ್ತಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳ ಕಿರುಚಿತ್ರ ಹಾಗೂ ಕಾರ್ಪೋರೇಟ್‌ ಮೈ ಸ್ಟ್ಯಾಂಪ್‌ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಚಿವರಾದ ಎಚ್‌.ಸಿ.ಮಹದೇವಪ್ಪ, ಕೆ.ಎಚ್‌. ಮುನಿಯಪ್ಪ, ಈಶ್ವರ ಖಂಡ್ರೆ, ಮುಖಂಡರಾದ ಮಾರ್ಗರೇಟ್‌ ಆಳ್ವ, ರಾಣಿ ಸತೀಶ್, ಮೋಟಮ್ಮ ಹಾಜರಿದ್ದರು.

ಐಸಿಡಿಎಸ್‌ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು   

ಸೇವೆ ಮಾಡಲು ಅವಕಾಶ ಕಲ್ಪಿಸಿ: ಡಿಕೆಶಿ

‘ಗ್ರಾಮದ ಮಹಿಳೆಯರ ಆರೋಗ್ಯ ಕಾಪಾಡುವ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ತ್ಯಾಗ ಪರಿಶ್ರಮವನ್ನು ಮರೆಯಲು ಸಾಧ್ಯವಿಲ್ಲ. ರಾಜ್ಯದಲ್ಲಿ ಮತ್ತೊಮ್ಮೆ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು. ‘ಎಲ್ಲಾ ತಾಯಂದಿರ ಆಶೀರ್ವಾದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಮೇಲಿರಲಿ. ಪ್ರತಿಯೊಬ್ಬರ ಮನೆಯ ದೀಪ ಬೆಳಗುವ ಕಾರ್ಯಕ್ರಮ ಕಾಂಗ್ರೆಸ್‌ ಸರ್ಕಾರ ಮಾಡಿದೆ ಮಾಡಲಿದೆ’ ಎಂದು ಹೇಳಿದರು.

ಯೋಜನೆಗಳ ಪರಿಚಯ

* ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರಿ ಸಂಘ: ಈ ಸಂಘದಲ್ಲಿ ಫಲಾನುಭವಿಗಳು/ಸದಸ್ಯರು ಷೇರುದಾರರಾಗಿರುತ್ತಾರೆ. ಸಹಕಾರಿ ಬ್ಯಾಂಕ್ ಕನಿಷ್ಠ ₹1000 ಕೋಟಿ ಬಂಡವಾಳ ಹೊಂದುವ ನಿರೀಕ್ಷೆಯಿದ್ದು ಇದರಿಂದಾಗಿ ರಾಜ್ಯದ ಮಹಿಳೆಯರಲ್ಲಿ ಆರ್ಥಿಕ ಸ್ವಾತಂತ್ರ್ಯ ಹೆಚ್ಚಿಸಲು ಅನುಕೂಲವಾಗುತ್ತದೆ.

* ಅಕ್ಕ ಪಡೆ: ತರಬೇತಿ ಪಡೆದ 10 ಮಹಿಳೆಯರನ್ನು ಒಳಗೊಂಡಿರುವ ಈ ಪಡೆಯು ಎರಡು ಪಾಳಿಗಳಲ್ಲಿ ದಿನದ 24X7 ಕಾರ್ಯನಿರ್ವಹಿಸುತ್ತದೆ. ಹೆಣ್ಣುಮಕ್ಕಳು ಕೆಲಸ ಮಾಡುವ ಮಹಿಳೆಯರ ಸುರಕ್ಷತೆಯತ್ತ ಗಮನಹರಿಸಲಿದ್ದು ಗೃಹ ಇಲಾಖೆಯ ಸಹಯೋಗದೊಂದಿಗೆ ಕಾರ್ಯನಿರ್ವಹಿಸಲಿದೆ.

* ಎಲ್‌ಕೆಜಿ/ಯುಕೆಜಿ ತರಗತಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದೆ. ಈ ಯೋಜನೆಯನ್ನು ನವೆಂಬರ್‌ನಲ್ಲಿ ರಾಜ್ಯದ 5 ಸಾವಿರ ಅಂಗನವಾಡಿ ಕೇಂದ್ರಗಳಿಗೆ ವಿಸ್ತರಿಸಲಾಗುತ್ತಿದ್ದು 3 ರಿಂದ 6 ವರ್ಷದೊಳಗಿನ 1 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪ್ರಯೋಜನವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.