ADVERTISEMENT

ಐಡೆಕ್ಸ್‌: ನವೋದ್ಯಮ ಮಳಿಗೆಯಲ್ಲಿ ಭವಿಷ್ಯದ ರಕ್ಷಣಾ ತಂತ್ರಜ್ಞಾನ

ಇ.ಎಸ್.ಸುಧೀಂದ್ರ ಪ್ರಸಾದ್
Published 13 ಫೆಬ್ರುವರಿ 2025, 20:15 IST
Last Updated 13 ಫೆಬ್ರುವರಿ 2025, 20:15 IST
ತ್ಸಲ್ಲಾ ಏರೋಸ್ಪೇಸ್‌ ಕಂಪನಿಯ ಫಿನಿಕ್ಸ್‌
ತ್ಸಲ್ಲಾ ಏರೋಸ್ಪೇಸ್‌ ಕಂಪನಿಯ ಫಿನಿಕ್ಸ್‌   

ಬೆಂಗಳೂರು: ಭವಿಷ್ಯದ ರಕ್ಷಣಾ ವ್ಯವಸ್ಥೆಗೆ ಬೇಕಿರುವ ಅತ್ಯಾಧುನಿಕ ಸಲಕರಣೆಗಳು ಯಲಹಂಕ ವಾಯು ನೆಲೆಯಲ್ಲಿ ಆಯೋಜನೆಗೊಂಡಿರುವ ಏರೊ ಇಂಡಿಯಾ 15ನೇ ಆವೃತ್ತಿಯಲ್ಲಿನ ಐಡೆಕ್ಸ್‌ ನವೋದ್ಯಮ ಮಳಿಗೆಯಲ್ಲಿ ಅನಾವರಣಗೊಂಡಿವೆ. ಬೆಂಗಳೂರು ಸಹಿತ ದೇಶದ ಪ್ರಮುಖ ನಗರಗಳಲ್ಲಿರುವ ಹಲವು ನವೋದ್ಯಮಗಳು ಅಭಿವೃದ್ಧಿಪಡಿಸಿರುವ ಸಾಧನಗಳು ದೇಶ, ವಿದೇಶಗಳ ಸೇನಾಧಿಕಾರಿಗಳ ಗಮನ ಸೆಳೆಯುತ್ತಿವೆ.

ಶತ್ರು ಸಂಹಾರಕ್ಕೆ ಪುಟ್ಟ ಸ್ಪಿಯರ್‌ಬಾಟ್‌: ಕಟ್ಟಡದ ಒಂದು ಪಾರ್ಶ್ವದಲ್ಲಿ ಶತ್ರುಗಳಿರುವ ಸಂಶಯವಿದ್ದಲ್ಲಿ, ಸ್ಪಿಯರ್‌ಬಾಟ್‌ ಎಂಬ ಸಾಧವನ್ನು ಗೋಡೆಯ ಆಚೆ ಎಸೆದರೆ ಸಾಕು. ಇದರಲ್ಲಿರುವ ಕ್ಯಾಮೆರಾ ಹಾಗೂ ಸೆನ್ಸರ್‌ಗಳು ಆ ಕೊಠಡಿಯ ದೃಶ್ಯ ಸಹಿತ ಮಾಹಿತಿಯನ್ನು ನೀಡಲಿವೆ. ಒಂದೊಮ್ಮೆ ತಾನೇ ದಾಳಿಗೆ ಒಳಗಾಗುವುದಾದರೆ, ತನ್ನನ್ನೇ ತಾನು ಸ್ಫೋಟಿಸಿಕೊಂಡು ಶತ್ರುಗಳನ್ನು ಸಂಹಾರ ಮಾಡಲಿದೆ. ಬೆಂಗಳೂರಿನ ಕ್ಸೆನೊಮಸ್‌ ಎಂಬ ಕಂಪನಿ ಈ ಸಾಧನವನ್ನು ಅಭಿವೃದ್ಧಿಪಡಿಸಿದೆ.

ಉಭಯ ಜೀವಿಯಂತೆ ಕೂರ್ಮ ಕೆಲಸ: ನೆಲ ಹಾಗೂ ನೀರಿನಲ್ಲಿ ಸಂಚರಿಸುವ ಸಾಮರ್ಥ್ಯವಿರುವ ಉಭಯಜೀವಿಯಂತೆ ತೆವಳುವ ರೊಬೊವನ್ನು ವಿಕ್ರಾ ಓಷನ್‌ ಟೆಕ್‌ ಕಂಪನಿ ಅಭಿವೃದ್ಧಿಪಡಿಸಿದೆ. ಚೆನ್ನೈನಲ್ಲಿ ತಯಾರಾಗಿರುವ ‘ಕೂರ್ಮ’ ರೊಬೊ, ಹಲವು ಸೆನ್ಸರ್‌ಗಳನ್ನು ಹೊಂದಿದ್ದು, ನೆಲ ಮತ್ತು ನೀರಿನೊಳಗೆ ನೆಲದ ಸದೃಢತೆಯನ್ನು ತಿಳಿಸುವ ಸಾಮರ್ಥ್ಯ ಹೊಂದಿದೆ. ಗಡಿ ಭದ್ರತಾ ಪಡೆಗೆ ಸಿದ್ಧಪಡಿಸಿರುವ ಈ ಸಾಧನ ಒಂದು ನಾಟಿಕಲ್ ಮೈಲು ವೇಗದಲ್ಲಿ ಆರು ಗಂಟೆಗಳವರೆಗೂ ಸಂಚರಿಸುವ ಮತ್ತು 2 ಕಿ.ಮೀ. ದೂರದವರೆಗೂ ಮಾಹಿತಿ ರವಾನಿಸುವ ಸಾಮರ್ಥ್ಯ ಹೊಂದಿದೆ.

ADVERTISEMENT

ಕಡಲಾಳದಲ್ಲಿ ಗಸ್ತು ತಿರುಗುವ ಯುಯುವಿ: ಹೈದರಾಬಾದ್ ಮೂಲದ ರೆಕಿಸೆ ಎಂಬ ಕಂಪನಿ ಅಭಿವೃದ್ಧಿಪಡಿಸಿರುವ ಮಾನವರಹಿತ ಜಲತಾಂರ್ಗಾಮಿ ಪುಟ್ಟ ನೌಕೆ ಜಲ್‌ಕಪಿ. 11 ಮೀಟರ್‌ ಉದ್ದದ ಈ ನೌಕೆಯು 300 ಮೀಟರ್‌ನಷ್ಟು ಕಡಲಾಳದಲ್ಲಿ 30ರಿಂದ 45 ದಿನಗಳವರೆಗೆ ಗಸ್ತು ತಿರುಗುವ ಸಾಮರ್ಥ್ಯ ಹೊಂದಿದೆ. ಇದನ್ನು ಕಡಲಿನ ನಕ್ಷೆ ತಯಾರಿಸಲು, ಶತ್ರು ನೌಕೆಗಳ ಮಾಹಿತಿ ರವಾನಿಸಲು ಮತ್ತು ತಕ್ಕಮಟ್ಟಿಗೆ ದಾಳಿ ನಡೆಸುವಂತೆ ಅಭಿವೃದ್ಧಿಪಡಿಸಲಾಗಿದೆ. ಇದೇ ಕಂಪನಿಯು ನೌಕಾದಳಕ್ಕೆ ಇನ್ನಷ್ಟು ಹೊಸ ತಂತ್ರಜ್ಞಾನದ ಸಾಧನಗಳನ್ನು ಅಭಿವೃದ್ಧಿಪಡಿಸಿ ಇಲ್ಲಿ ಪ್ರದರ್ಶನಕ್ಕಿಟ್ಟಿದೆ.

ಸುರಂಗ ಮಾರ್ಗ ಪತ್ತೆಮಾಡುವ ಭುವಿ: ನಿಯೊಟೊ ಕಂಪನಿ ಅಭಿವೃದ್ಧಿಪಡಿಸಿರುವ ನೆಲದಡಿಯ ಬಂಕರ್‌ಗಳ ಪತ್ತೆ ಮಾಡುವ ಡ್ರೋನ್‌ ಭುವಿ. ಶತ್ರುಗಳು ನೆಲದಡಿಯಲ್ಲಿ ಸುರಂಗ ನಿರ್ಮಿಸಿದ್ದರೆ, ಅದನ್ನು ಭೂಮಿ ಮೇಲೆ ಒಂದು ಮೀಟರ್‌ ಎತ್ತರದಲ್ಲಿ ಹಾರಾಡುವ ಈ ಸಾಧನ ಪತ್ತಹೆಚ್ಚಬಲ್ಲದು. ನೆಲದಡಿಯಲ್ಲಿ 10 ಮೀಟರ್‌ ಆಳದವರಗಿನ ಮಾಹಿತಿಯನ್ನು ಇದು ನೀಡಬಲ್ಲದು.

ಹಡಗಿನ ವಿಪತ್ತು ನಿರ್ವಹಣೆಗೆ ಫೀನಿಕ್ಸ್‌: ಹಡಗುಗಳಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದಲ್ಲಿ, ವಿದ್ಯುತ್ ಪೂರೈಕೆಯನ್ನು ಮೊದಲು ಸ್ಥಗಿತಗೊಳಿಸಲಾಗುತ್ತದೆ. ದಟ್ಟ ಹೊಗೆ ಆವರಿಸಿದ ಸ್ಥಳದಲ್ಲಿ ಮನುಷ್ಯರು ಹೋಗುವುದು ಕಷ್ಟದ ಕೆಲಸ. ಇದಕ್ಕಾಗಿಯೇ ಬೆಂಗಳೂರು ಮೂಲದ ತ್ಸಲ್ಲಾ ಏರೋಸ್ಪೇಸ್‌ ಕಂಪನಿಯು ಫೀನಿಕ್ಸ್‌ ಎಂಬ ಡ್ರೋನ್‌ ಅಭಿವೃದ್ಧಿಪಡಿಸಿದೆ. 200 ಡಿಗ್ರಿ ತಾಪಮಾವನ್ನೂ ತಡೆದುಕೊಳ್ಳಬಲ್ಲ ಸಾಮರ್ಥ್ಯವಿರುವ ಈ ಡ್ರೋನ್‌, ಹೊಗೆ ಆವರಿಸಿರುವ ಸ್ಥಳದಲ್ಲಿ ಹಾರಾಟ ನಡೆಸಿ, ಅಲ್ಲಿನ ಮಾಹಿತಿಯನ್ನು ನಿಯಂತ್ರಣ ಕೋಣೆಗೆ ಕಳುಹಿಸುವ ಸಾಮರ್ಥ್ಯ ಹೊಂದಿದೆ.

ರೇಕಿಸೆ ಕಂಪನಿ ಅಭಿವೃದ್ಧಿಪಡಿಸಿರುವ ಜಲ್‌ಕಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.