ADVERTISEMENT

ಶ್ರಮ ಪಟ್ಟರೆ ಪ್ರತಿಫಲ ಸಿಗಲಿದೆ: ವಿದ್ಯಾರ್ಥಿಗಳಿಗೆ ಶಾಸಕ ಮುನಿರಾಜು ಕಿವಿಮಾತು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 16:09 IST
Last Updated 12 ಆಗಸ್ಟ್ 2025, 16:09 IST
ಸಮಾರಂಭದಲ್ಲಿ ಶಾಸಕ ಎಸ್. ಮುನಿರಾಜು ಮಾತನಾಡಿದರು. (ಎಡದಿಂದ ಬಲಕ್ಕೆ) ಸಮಾಜ ಸೇವಕ ಬಿ.ಟಿ. ಶ್ರೀನಿವಾಸ್, ಪ್ರಾಧ್ಯಾಪಕರಾದ ಪುಟ್ಟ ನರಸಿಂಹಮೂರ್ತಿ, ಪ್ರಾಂಶುಪಾಲೆ ಅಮೃತಾಕ್ಷಿ, ದೇವರಾಜು, ಶಶಿಧರ್ ಇದ್ದರು.
ಸಮಾರಂಭದಲ್ಲಿ ಶಾಸಕ ಎಸ್. ಮುನಿರಾಜು ಮಾತನಾಡಿದರು. (ಎಡದಿಂದ ಬಲಕ್ಕೆ) ಸಮಾಜ ಸೇವಕ ಬಿ.ಟಿ. ಶ್ರೀನಿವಾಸ್, ಪ್ರಾಧ್ಯಾಪಕರಾದ ಪುಟ್ಟ ನರಸಿಂಹಮೂರ್ತಿ, ಪ್ರಾಂಶುಪಾಲೆ ಅಮೃತಾಕ್ಷಿ, ದೇವರಾಜು, ಶಶಿಧರ್ ಇದ್ದರು.   

ಪೀಣ್ಯ ದಾಸರಹಳ್ಳಿ: 'ಶ್ರಮ ಪಟ್ಟು ಅಭ್ಯಾಸ ಮಾಡಿದರೆ ಮುಂದೆ ತಕ್ಕ ಪ್ರತಿಫಲ ದೊರಕುವುದು ಖಚಿತ. ಹಾಗಾಗಿ ಚಂಚಲ ಮನಸ್ಸಿಗೆ ಕಡಿವಾಣ ಹಾಕಿ ಏಕಾಗ್ರತೆಯಿಂದ ಓದಿನ ಕಡೆ ಗಮನಹರಿಸಬೇಕು' ಎಂದು ಶಾಸಕ ಎಸ್. ಮುನಿರಾಜು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ಕಾಳಸ್ರೀ ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್, ರೆಡ್ ಕ್ರಾಸ್, ಕನ್ನಡ ಸಂಘ ಮತ್ತು ವಿವಿಧ ಸಮಿತಿಗಳ 2025-26ನೇ ಸಾಲಿನ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಓದು, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದನ್ನು ರೂಡಿಸಿಕೊಳ್ಳಿ. ಪ್ರತಿದಿನ ದಿನಪತ್ರಿಕೆ ಓದುವುದರಿಂದ ಜ್ಞಾನಾರ್ಜನೆ ಹೆಚ್ಚುತ್ತದೆ' ಎಂದರು.

ADVERTISEMENT


ಕಳೆದ ಸಾಲಿನಲ್ಲಿ ಶೇ 85ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಲಾಗುವುದು. ವಿದ್ಯಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದಾಗ ಇನ್ನೂ ಹೆಚ್ಚು ಅಂಕ ಪಡೆಯಬಹುದು ಎಂಬ ಉದ್ದೇಶ ನಮ್ಮದು' ಎಂದು ತಿಳಿಸಿದರು.


ಸರ್ಕಾರಿ ಶಾಲೆಯ ಮಕ್ಕಳು ಉತ್ತಮ ವಿದ್ಯಾಭ್ಯಾಸದಿಂದ ವಂಚಿತರಾಗಬಾರದೆಂದು ಕ್ಷೇತ್ರದ ಎಲ್ಲಾ ಶಾಲೆಗಳಿಗೆ ಸೂರಜ್ ಫೌಂಡೇಷನ್ ವತಿಯಿಂದ ಸಹಾಯ ಮಾಡಲಾಗುತ್ತಿದೆ' ಎಂದು ಹೇಳಿದರು.
ಪ್ರಾಂಶುಪಾಲೆ ಅಮೃತಾಕ್ಷಿ ಜಿ, ‘ನಮ್ಮ ಕಾಲೇಜಿಗೆ ಇರುವ ಅನೇಕ ಕೊರತೆಗಳನ್ನು ಶಾಸಕರು ಬಗೆಹರಿಸಿದ್ದಾರೆ, ಇನ್ನು ಕಟ್ಟಡದ ಅವಶ್ಯಕತೆ ಇದೆ. ನೂತನವಾಗಿ ನಿರ್ಮಿಸಿರುವ ಕೊಠಡಿಗಳನ್ನು ನೀಡಿದರೆ ಉಪಯೋಗವಾಗುತ್ತದೆ’ ಎಂದು ಮನವಿ ಮಾಡಿದರು.


ಸಮಾರಂಭದಲ್ಲಿ ಸೂರಜ್ ಫೌಂಡೇಷನ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ, ಪ್ರತಿನಿತ್ಯ ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ ದಿನಪತ್ರಿಕೆ ವಿತರಣೆಗೆ ಚಾಲನೆ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.