ADVERTISEMENT

‘ರ್‍ಯಾಪಿಡ್ ರಸ್ತೆ’ ಬಿರುಕು: ಐಐಎಸ್‌ಸಿ ವರದಿ ಬಳಿಕ ಕ್ರಮ- ತುಷಾರ್ ಗಿರಿನಾಥ್

ಹಳೆ ಮದ್ರಾಸ್ ರಸ್ತೆಯಲ್ಲಿ ನಿರ್ಮಿಸುತ್ತಿರುವ ‘ರ್‍ಯಾಪಿಡ್ ರಸ್ತೆ’ ಬಿರುಕು: ತುಷಾರ್ ಗಿರಿನಾಥ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 21:25 IST
Last Updated 7 ಜನವರಿ 2023, 21:25 IST
ತುಷಾರ್ ಗಿರಿನಾಥ್
ತುಷಾರ್ ಗಿರಿನಾಥ್   

ಬೆಂಗಳೂರು: ಹಳೆ ಮದ್ರಾಸ್ ರಸ್ತೆಯಲ್ಲಿ ನಿರ್ಮಿಸುತ್ತಿರುವ ‘ರ್‍ಯಾಪಿಡ್ ರಸ್ತೆ’ ಬಿರುಕು ಬಿಟ್ಟಿರುವ ಸಂಬಂಧ ಐಐಎಸ್‌ಸಿ ತಜ್ಞರು ಪರಿಶೀಲನೆ ನಡೆಸುತ್ತಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಇದು ಪ್ರಾಯೋಗಿಕ ರಸ್ತೆಯಾಗಿದ್ದು, ಬಿರುಕು ಬಿಡಲು ಕಾರಣ ಏನು ಮತ್ತು ಮುಂದೇನು ಮಾಡಬೇಕು ಎಂಬುದನ್ನು ಐಐಎಸ್‌ಸಿ ತಜ್ಞರು ವರದಿಯಲ್ಲಿ ತಿಳಿಸಲಿದ್ದಾರೆ.

ಈ ರಸ್ತೆ ನಿರ್ಮಾಣ ಆರ್ಥಿಕವಾಗಿಯೂ ಕಾರ್ಯಸಾಧುವೆ ಎಂಬುದರಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

ADVERTISEMENT

‘ಅಷ್ಟು ದಪ್ಪದಾದ ಪ್ರಿಕಾಸ್ಟ್‌ ರಸ್ತೆ ಬೇಕೆ–ಬೇಡವೇ ಎಂಬುದನ್ನು ವೈಜ್ಞಾನಿಕವಾಗಿ ಪರಿಶೀಲಿಸ ಬೇಕಾಗುತ್ತದೆ. ಎಷ್ಟು ದರ ಆಗಲಿದೆ ಎಂಬುದನ್ನು ನೋಡಿಕೊಂಡು ಮುಂದುವರಿಯಬೇಕಾಗುತ್ತದೆ. ಕಾರ್ಯಸಾಧು ಎನಿಸಿದರೆ ಲೋಕೋಪಯೋಗಿ ಇಲಾಖೆ ಎಸ್‌ಆರ್ ದರ ನಿಗದಿ ಮಾಡಲಿದೆ. ಈಗ ನಿರ್ಮಿಸುತ್ತಿರುವ ರಸ್ತೆ ಪ್ರಾಯೋಗಿಕವಷ್ಟೇ’ ಎಂದರು.

ಡಿವಿಜಿ ರಸ್ತೆಯಲ್ಲಿನ ವ್ಯಾಪಾರಿಗಳಿಗೆ ನೋಟಿಸ್ ನೀಡಿರುವ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಾಸದ ಉದ್ದೇಶದ ಕಟ್ಟಡವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿದ್ದರೆ ಆಸ್ತಿ ತೆರಿಗೆ ಪಾವತಿಸಬೇಕಾಗುತ್ತದೆ. ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಮಾಡಿಕೊಳ್ಳದಿದ್ದರೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸುವುದು ಅನಿವಾರ್ಯ ಎಂದರು.

ಜ.16ರಿಂದ ಒತ್ತುವರಿ ತೆರವು

‘ರಾಜಕಾಲುವೆ ಒತ್ತುವರಿ ತೆರವು ಸಂಬಂಧ ಸಭೆ ನಡೆಸಿದ್ದೇವೆ. 242 ಆಸ್ತಿಗಳ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, 26 ಪ್ರಕರಣದಲ್ಲಿ ತೆರವಿಗೆ ಆದೇಶ ಕೂಡ ಆಗಿದೆ. ಇದೇ 16ರ ನಂತರ ತೆರವು ಕಾರ್ಯಾಚರಣೆಯನ್ನು ಮತ್ತೆ ಆರಂಭಿಸಲಾಗುವುದು ಎಂದು ತುಷಾರ್ ಗಿರಿನಾಥ್ ಹೇಳಿದರು.

ಬಾಕಿ ಪ್ರಕರಣದಲ್ಲೂ ಆದೇಶವಾಗಬೇಕಿದ್ದು, ಜನವರಿ 30ರ ವೇಳೆಗೆ ಎಲ್ಲಾ ಪ್ರಕರಣದಲ್ಲೂ ಆದೇಶ ಹೊರಡಿಸಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ಈ ಪೈಕಿ 233 ಪ್ರಕರಣವನ್ನು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಲಿದೆ. ಸದ್ಯ ಆದೇಶ ಆಗಿರುವ ಪ್ರಕರಣಗಳಲ್ಲಿ 17 ಆಸ್ತಿ ತೆರವು ಕಾರ್ಯಾಚರಣೆ ನಡೆಯಬೇಕಿದೆ. ರಾಜಕಾಲುವೆ
ಮೇಲೆ ಯಾವುದೇ ಆಸ್ತಿ ಇದ್ದರೂ ತೆರವುಗೊಳಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.