ADVERTISEMENT

ಐಐಎಸ್‌ಸಿ ₹1.94 ಕೋಟಿ ವಂಚನೆ ಪ್ರಕರಣ: ಮತ್ತೊಬ್ಬ ಆರೋಪಿ ಸೆರೆ

ಐಐಎಸ್‌ಸಿ: ವಿದ್ಯಾರ್ಥಿಗಳ ವಿದೇಶ ಪ್ರಯಾಣದ ಮುಂಗಡ ಹಣ ದುರುಪಯೋಗ ಪ್ರಕರಣ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 23:30 IST
Last Updated 12 ನವೆಂಬರ್ 2025, 23:30 IST
ಸೌಂದರ್ಯ 
ಸೌಂದರ್ಯ    

ಬೆಂಗಳೂರು: ನಗರದ ಸಿ.ವಿ.ರಾಮನ್‌ ರಸ್ತೆಯಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ವಿದ್ಯಾರ್ಥಿಗಳಿಗೆ ಮಂಜೂರಾದ ಹಣವನ್ನು ತಮ್ಮ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಸದಾಶಿವನಗರ ಠಾಣೆಯ ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ ಮೂರಕ್ಕೇರಿದೆ.

ಬನ್ನೇರುಘಟ್ಟ ರಸ್ತೆಯ ಅರಕೆರೆಯ ನಿವಾಸಿ ಸಚಿನ್‌ ರಾವ್ ಬಂಧಿತ.

ಇದೇ ಪ್ರಕರಣದಲ್ಲಿ ಯಶವಂತಪುರದ ಎಲ್‌ಎನ್‌ ಕಾಲೊನಿಯ ನಿವಾಸಿ ವಿ.ಸೌಂದರ್ಯ ಹಾಗೂ ಹೆಸರುಘಟ್ಟದ ಆರ್.ದೀಪಿಕಾ ಎಂಬುವವರನ್ನು ನ.7ರಂದು ಬಂಧಿಸಲಾಗಿತ್ತು.

ADVERTISEMENT

ವಿ.ಸೌಂದರ್ಯ ಕಾರ್ಯದರ್ಶಿಯಾಗಿ, ದೀಪಿಕಾ ಸಹಾಯಕಿಯಾಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಹೊರಗುತ್ತಿಗೆ ಸಂಸ್ಥೆ ವೆಂಕಟೇಶ್ವರ ಎಂಟರ್‌ಪ್ರೈಸಸ್‌ ಮೂಲಕ ನೇಮಕಗೊಂಡಿದ್ದರು. 

ಸಂಸ್ಥೆಯ ರಿಜಿಸ್ಟ್ರಾರ್‌ ಶ್ರೀಧರ್ ವಾರಿಯರ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಸೌಂದರ್ಯ ಹಾಗೂ ದೀಪಿಕಾ ಅವರಿಗೆ ವಂಚನೆ ಕೃತ್ಯಕ್ಕೆ ಸಚಿನ್‌ ರಾವ್ ನೆರವು ನೀಡಿದ್ದ ಎಂಬುದು ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದರು.

‘ವಿದ್ಯಾರ್ಥಿಗಳ ವಿದೇಶ ಪ್ರಯಾಣಕ್ಕಾಗಿ ಪಾವತಿಸಬೇಕಾದ ಮುಂಗಡ ಹಣವನ್ನು ಮೂವರು ಆರೋಪಿಗಳು ದುರ್ಬಳಕೆ ಮಾಡಿಕೊಂಡಿದ್ದರು. ಹಣ ಮಂಜೂರಾತಿ ಆದೇಶಗಳನ್ನು ತಿರುಚಿ, ವಿದ್ಯಾರ್ಥಿಗಳ ಬ್ಯಾಂಕ್ ಖಾತೆ ವಿವರಗಳನ್ನು ಕಾನೂನುಬಾಹಿರವಾಗಿ ಬದಲಾಯಿಸಿಕೊಂಡು ವಂಚಿಸಿದ್ದರು. ಹಣವನ್ನು ತಮ್ಮ ಕುಟುಂಬದ ಸದಸ್ಯರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು. ಇದುವರೆಗೂ ನಡೆದಿರುವ ತನಿಖೆಯಿಂದ ₹1.94 ಕೋಟಿ ವಂಚನೆ ಎಸಗಿರುವುದು ಪತ್ತೆ ಆಗಿದೆ’ ಎಂದು ಪೊಲೀಸರು ಹೇಳಿದರು.

‘ಸಂಸ್ಥೆಯ ಆಂತರಿಕ ತನಿಖೆಯಲ್ಲಿ ಮೂವರೂ ಹಣ ದುರ್ಬಳಕೆ ಮಾಡಿಕೊಂಡಿರುವುದು ಪತ್ತೆ ಆಗಿತ್ತು. ಸಂಸ್ಥೆಯ ಅಧಿಕಾರಿಗಳ ಮುಂದೆಯೂ ಆರೋಪಿಗಳು ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದರು’ ಎಂದು ಮೂಲಗಳು ಹೇಳಿವೆ.

ನಿವೇಶನ ಖರೀದಿ: ವಂಚಿಸಿದ ಹಣದಿಂದ ಮೂವರು ಆರೋಪಿಗಳೂ ನಿವೇಶನ ಖರೀದಿಸಿದ್ದರು. ₹ 80 ಲಕ್ಷ ಮೌಲ್ಯದ ಎರಡು ನಿವೇಶನ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಆರೋಪಿಗಳಿಂದ ₹15 ಲಕ್ಷ ಮೌಲ್ಯದ 121 ಗ್ರಾಂ ಚಿನ್ನಾಭರಣ, ₹11 ಲಕ್ಷ ನಗದು, ₹ 10 ಲಕ್ಷ ಮೌಲ್ಯದ ಕಾರು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ದೀಪಿಕಾ 
ಸಚಿನ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.