ADVERTISEMENT

ಅಕ್ರಮ ನೇಮಕ: ಕೆಪಿಎಸ್‌ಸಿ ಅಧ್ಯಕ್ಷರ ವಜಾಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಜನವರಿ 2023, 19:32 IST
Last Updated 9 ಜನವರಿ 2023, 19:32 IST
ಕೆಪಿಎಸ್‌ಸಿ
ಕೆಪಿಎಸ್‌ಸಿ   

ಬೆಂಗಳೂರು: ‘ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಸ್ಥಾನಕ್ಕೆ ಶಿವಶಂಕರಪ್ಪ ಸಾಹುಕಾರ ಅವರನ್ನು ನೇಮಕ ಮಾಡಿರುವುದು ಸಂವಿಧಾನಬಾಹಿರವಾಗಿದೆ. ತಕ್ಷಣ ಅವರನ್ನು ಆ ಹುದ್ದೆಯಿಂದ ವಜಾಗೊಳಿಸಬೇಕು’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ ಎಸ್‌ಟಿ ನೌಕರರ ಸಮನ್ವಯ ಸಮಿತಿ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಸಮಿತಿಯ ಅಧ್ಯಕ್ಷ ಡಿ. ಶಿವಶಂಕರ್, ‘ಸಂವಿಧಾನದ 316(1)ರ ವಿಧಿಯ ಪ್ರಕಾರ ಕೆಪಿಎಸ್‌ಸಿ ಆಯೋಗದ ಅಧ್ಯಕ್ಷ ಅಥವಾ ಸದಸ್ಯ ಸ್ಥಾನಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಧೀನದಲ್ಲಿ ಕನಿಷ್ಠ 10 ವರ್ಷಗಳವರೆಗೆ ಕಾರ್ಯನಿರ್ವಹಿಸಿರಬೇಕು. ಆದರೆ, ಸಹಕಾರಿ ಯೂನಿಯನ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿರುವ ಸಾಹುಕಾರ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ನಿಯಮ ಉಲ್ಲಂಘಿಸಲಾಗಿದೆ’ ಎಂದು ಆರೋಪಿಸಿದರು.

‘ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರದ ಶಿಫಾರಸಿನ ಅನ್ವಯ ಶಿವಶಂಕರಪ್ಪ ಸಾಹುಕಾರ್‌ ಅವರನ್ನು 'ಅಫಿಶಿಯಲ್‌ ಕೆಟಗರಿ'ಯಲ್ಲಿ (ಅಧಿಕಾರಿ ವರ್ಗ) ಕೆಪಿಎಸ್‌ಸಿ ಸದಸ್ಯರಾಗಿ ನೇಮಿಸಿ 2019ರ ಆಗಸ್ಟ್‌ 31ರಂದು ಅಂದು ರಾಜ್ಯಪಾಲರಾಗಿದ್ದ ವಜುಭಾಯ್‌ ವಾಲಾ ಅವರು ಅಧಿಸೂಚನೆ ಹೊರಡಿಸಿದ್ದರು. ಆ ಬಳಿಕ, ಮತ್ತೆ ಸರ್ಕಾರದ ಶಿಫಾರಸಿನಂತೆ ಕೆಪಿಎಸ್‌ಸಿ ಅಧ್ಯಕ್ಷರಾಗಿ ನೇಮಿಸಿ 2021ರ ಏಪ್ರಿಲ್‌ 3ರಂದು ಅಧಿಸೂಚನೆ ಹೊರಡಿಸಲಾಗಿದೆ’ ಎಂದರು.

ADVERTISEMENT

‘ಶಿವಶಂಕರಪ್ಪ ಸಾಹುಕಾರ ಅವರು ರಾಷ್ಟ್ರೀಯ ಸಹಕಾರ ಯೂನಿಯನ್‌ನಲ್ಲಿ 10 ವರ್ಷ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿದ್ದರು. ಅವರ ಕೆಲಸ ತೃಪ್ತಿಕರವಾಗಿಲ್ಲವೆಂದು ಈ ಯೂನಿಯನ್‌ ನಕಾರಾತ್ಮಕ ವರದಿ ನೀಡಿ ಅವರನ್ನು ಹುದ್ದೆಯನ್ನು ಕೈಬಿಟ್ಟಿತ್ತು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.