ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಮಹದೇವಪುರ ಹಾಗೂ ಪಶ್ಚಿಮ ವಲಯದಲ್ಲಿ ಅನಧಿಕೃತವಾಗಿ ನಿರ್ಮಾಣವಾಗುತ್ತಿದ್ದ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭವಾಗಿದೆ.
ಮಹದೇವಪುರ ವಲಯದ ಹೂಡಿ ಉಪ ವಿಭಾಗದ ಆಲ್ಫಾ ಗಾರ್ಡನ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ವ್ಯತಿರಿಕ್ತ ಭಾಗಗಳು ಮತ್ತು ಹೆಚ್ಚುವರಿ ಮಹಡಿಯ ತೆರವು ಕಾರ್ಯಾಚರಣೆಯನ್ನು ಸೋಮವಾರದಿಂದ ಪ್ರಾರಂಭಿಸಲಾಯಿತು.
ಸರ್ವೆ ನಂ.40ರಲ್ಲಿ ಸುರೇಶ್ ತಮ್ಮಿನಾ ಮಾಲೀಕತ್ವದಲ್ಲಿರುವ 40 x60 ಅಡಿ ವಿಸ್ತೀರ್ಣದಲ್ಲಿ ನೆಲಮಹಡಿ ಮತ್ತು ಮೂರು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಆದರೆ ಮಾಲೀಕರು ಹೆಚ್ಚುವರಿಯಾಗಿ ಒಂದು ಅಂತಸ್ತನ್ನು ನಿರ್ಮಾಣ ಮಾಡಿರುತ್ತಾರೆ. ಈ ಸಂಬಂಧ ಪಾಲಿಕೆ ಅಧಿಕಾರಿಗಳು ಮಾಲೀಕರಿಗೆ ನೋಟೀಸ್ ಜಾರಿ ಮಾಡಿ ತೆರವು ಕಾರ್ಯ ಆರಂಭಿಸಿದರು.
ಮಾಲೀಕರು 10 ದಿನಗಳಲ್ಲಿ ವ್ಯತಿರಿಕ್ತ ಭಾಗಗಳು ಮತ್ತು ಹೆಚ್ಚುವರಿ ಮಹಡಿಯನ್ನು ತೆರವುಗೊಳಿಸುವುದಾಗಿ ಮನವಿ ಪತ್ರ ನೀಡಿದ್ದು, ಅದಕ್ಕೆ ಪಾಲಿಕೆ ಸಿಬ್ಬಂದಿ ಸಮ್ಮತಿ ನೀಡಿದರು.
ಕಾರ್ಯಪಾಲಕ ಎಂಜಿನಿಯರ್ ರವಿಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸ್ ಮೂರ್ತಿ ಉಪಸ್ಥಿತರಿದ್ದರು.
ಪಾದಚಾರಿ ಮಾರ್ಗ ಒತ್ತುವರಿ: ಪಶ್ಚಿಮ ವಲಯ ಗಾಂಧಿನಗರ ವ್ಯಾಪ್ತಿಯ ಗುಬ್ಬಿ ತೋಟದಪ್ಪ ರಸ್ತೆ ಶಾಂತಲಾ ಸಿಲ್ಕ್ ಬಳಿ ವಾಣಿಜ್ಯ ಕಟ್ಟಡದ ಮಾಲೀಕ ದಿಲೀಪ್ ಕುಮಾರ್ ಅವರು, ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿಕೊಂಡು, ನಿರ್ಮಿಸಿದ್ದ ಮೆಟ್ಟಿಲುಗಳನ್ನು ತೆರವುಗೊಳಿಸಲಾಗಿದೆ.
ಪಶ್ಚಿಮ ವಲಯ ಆಯುಕ್ತೆ ಅರ್ಚನಾ, ವಲಯ ಜಂಟಿ ಆಯುಕ್ತ ಸಂಗಪ್ಪ ಅವರ ನೇತೃತ್ವದಲ್ಲಿ ಪಾಲಿಕೆ ಸಿಬ್ಬಂದಿ, ಸುಮಾರು 25 ಅಡಿಯ ಪಾದಚಾರಿ ಮಾರ್ಗದ ಒತ್ತುವರಿಯನ್ನು ತೆರವು ಮಾಡಿದರು. ಮೆಟ್ಟಿಲುಗಳನ್ನು ತೆರವುಗೊಳಿಸಲು ಕಟ್ಟಡ ಮಾಲೀಕರಿಗೆ ಪಾಲಿಕೆ ವತಿಯಿಂದ ತಿಳಿವಳಿಕೆ ಪತ್ರ ನೀಡಲಾಗಿತ್ತು. ಆದರೂ ತೆರವುಗೊಳಿಸದ ಕಾರಣ ಪಾಲಿಕೆಯಿಂದಲೇ ಸೋಮವಾರ ತೆರವು ಮಾಡಲಾಯಿತು. ಇದರ ವೆಚ್ಚವನ್ನು ಕಟ್ಟಡ ಮಾಲೀಕರಿಂದ ವಸೂಲಿ ಮಾಡಲಾಗುವುದು ಎಂದು ಬಿಬಿಎಂಪಿ ಸಿಬ್ಬಂದಿ ತಿಳಿಸಿದರು.
ಸ್ಥಳದಲ್ಲಿ ಕಾರ್ಯಪಾಲಕ ಎಂಜಿನಿಯರ್ ಮುನಿಯಪ್ಪ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿಶ್ವನಾಥ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.