ADVERTISEMENT

ವುಹಾನ್‌ ಪ್ರಜೆ ಬಳಿ ಅಕ್ರಮವಾಗಿ ₹ 4 ಕೋಟಿ ಮೌಲ್ಯದ ಚೀನಾ ಸರಕು ದಾಸ್ತಾನು

₹ 4 ಕೋಟಿ ಮೌಲ್ಯದ ಚೀನಾ ಸರಕು ವಶ

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 14:46 IST
Last Updated 25 ಜೂನ್ 2020, 14:46 IST
ವಶ ಪಡಿಸಿಕೊಂಡಿರುವ ವಸ್ತುಗಳು
ವಶ ಪಡಿಸಿಕೊಂಡಿರುವ ವಸ್ತುಗಳು   

ಬೆಂಗಳೂರು: ನಗರದ ಗೋದಾಮು ಒಂದರ ಮೇಲೆ ದಾಳಿ ನಡೆಸಿದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಚೀನಾ ಪ್ರಜೆಯೊಬ್ಬ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸದೆ ಅಕ್ರಮವಾಗಿ ದಾಸ್ತಾನಿಟ್ಟಿದ್ದ ₹ 4 ಕೋಟಿ ಮೌಲ್ಯದ ಚೀನಾದಲ್ಲಿ ತಯಾರಿಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ವುಹಾನ್‌ ನಾಗರಿಕ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ಗೋದಾಮು ಗುತ್ತಿಗೆಗೆ ಪಡೆದು ₹ 4 ಕೋಟಿ ಮೌಲ್ಯದ 25,446 ಸಂಖ್ಯೆಯ ಚೀನಾ ವಸ್ತುಗಳನ್ನು ಅಕ್ರಮವಾಗಿ ದಾಸ್ತಾನಿಟ್ಟಿರುವ ಬಗ್ಗೆ ಸಿಕ್ಕ ಸುಳಿವು ಅಧರಿಸಿ ವಾಣಿಜ್ಯ ತೆರಿಗೆ ಇಲಾಖೆ ದಕ್ಷಿಣ ವಲಯ ಹೆಚ್ಚುವರಿ ಕಮಿಷನರ್ ನಿತೇಶ್‌ ಪಾಟೀಲರ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.

ಒಂದೇ ವಿಳಾಸದಲ್ಲಿ 60 ಕಂಪನಿಗಳನ್ನು ಸ್ಥಾಪಿಸಿ, ಬೇರೆ ಬೇರೆ ವ್ಯಕ್ತಿಗಳ ಹೆಸರಿನಲ್ಲಿ ‌ಜಿಎಸ್‌ಟಿ ಹಾಗೂ ಸಿಜಿಎಸ್‌ಟಿ ನೋಂದಣಿ ಪಡೆಯಲಾಗಿದೆ. ಚೀನಾದಿಂದ ಈ ವಸ್ತುಗಳನ್ನು ಆಮದು ಮಾಡಿಕೊಂಡು ಆನ್‌ಲೈನ್‌ನಲ್ಲಿ‌ ವ್ಯಾಪಾರ ಮಾಡಲಾಗುತಿತ್ತು. ಆದರೆ, ನೋಂದಾಯಿತ ವಿಳಾಸದಲ್ಲಿ ಯಾರೂ ಇಲ್ಲ ಎಂದು ಮೂಲಗಳು ಹೇಳಿವೆ.

ADVERTISEMENT

2017–18ರಲ್ಲಿ 1, 2018–19ರಲ್ಲಿ 43, 2019– 20ರಲ್ಲಿ 14 ಮತ್ತು 2020– 21ರಲ್ಲಿ 2 ಕಂಪನಿಗಳನ್ನು ನೋಂದಾಯಿಸಲಾಗಿದ್ದು, 58 ಕಂಪನಿಗಳಲ್ಲಿ 24 ನಿರ್ದೇಶಕರು ಅವರವರೇ ಇದ್ದಾರೆ. ಈ ಪೈಕಿ ಬಹುತೇಕ ಕಂಪನಿಗಳು ವ್ಯಾಪಾರ– ವಹಿವಾಟು ಕುರಿತಾದ ವಿವರ ಸಲ್ಲಿಸಿಲ್ಲ. ವಿವರ ಸಲ್ಲಿಸಿರುವ ಕಂಪನಿಗಳೂ ವಹಿವಾಟು ನಡೆಸಿರುವ ಕುರಿತು ಮಾಹಿತಿ ನೀಡದೆ ತೆರಿಗೆ ವಂಚಿಸಿದ ಆರೋಪಕ್ಕೆ ಒಳಗಾಗಿವೆ.

ಕಳೆದ ವರ್ಷದ ಜೂನ್‌ ತಿಂಗಳಲ್ಲಿ ವ್ಯಾಪಾರ ವಹಿವಾಟು ಆರಂಭಿಸಿರುವ ಚೀನಾದ ಪ್ರಜೆ ಜನವರಿಯಲ್ಲಿ ಸ್ವದೇಶಕ್ಕೆ ವಾಪಸ್‌ ಹೋಗಿದ್ದಾರೆ. ಅಲ್ಲಿಂದಲೇ ಆನ್‌ಲೈನ್‌ನಲ್ಲಿ ವಹಿವಾಟು ನಡೆಸುತ್ತಿದ್ದಾರೆ. ಕಂಪನಿಗೆ ಸಂಬಂಧಪಟ್ಟ ಉಳಿದವರೂ ಪತ್ತೆ ಆಗಿಲ್ಲ. ಯಾರೂ ಈ ವಸ್ತುಗಳ ತಮ್ಮದೆಂದು ಹೇಳಿಕೊಳ್ಳಲು ಮುಂದೆ ಬಂದಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಗೋದಾಮಿಗೆ ಸದ್ಯ ಬೀಗ ಹಾಕಿದ್ದಾರೆ. ಹೊಸದಾಗಿ ನೋಂದಣಿಯಾಗಿರುವ ಕಂಪನಿಗಳ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ತೆರಿಗೆ ಪಾವತಿಸದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಎಂ.ಎಸ್‌. ಶ್ರೀಕರ್‌ ಎಚ್ಚರಿಕೆ ನೀಡಿದ್ದಾರೆ.

ಜನಪ್ರಿಯ ಕಂಪನಿಗಳ ಬಳಕೆ

ಜನಪ್ರಿಯ ಇ– ಕಾಮರ್ಸ್‌ ಕಂಪನಿಗಳ ಮುಖಾಂತರ ಈ ಕಂಪನಿಗಳು ಸರಕು ಮಾರಾಟ ಮಾಡಿವೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

2020ರ ಜೂನ್‌ನಿಂದ ವುಹಾನ್‌ ಪ್ರಜೆ ನಗರದಲ್ಲಿ ವಹಿವಾಟು ಆರಂಭಿಸಿದ್ದು, ದೈತ್ಯ ಕಂಪನಿಗಳ ಮೂಲಕ ಮಾರಾಟ ಮಾಡಿರುವ ಸರಕುಗಳ ಬಗ್ಗೆ ಮಾಹಿತಿ ಕೇಳಿ ಪತ್ರ ಬರೆಯಲಾಗುತ್ತಿದೆ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.