ADVERTISEMENT

ಅಕ್ರಮ ಕಟ್ಟಡ: ಬೆಂಗಳೂರಿನಲ್ಲಿ 50ರಷ್ಟು ಸರ್ವೆ

ನಕ್ಷೆ ಉಲ್ಲಂಘಿಸಿರುವ 36,759 ಕಟ್ಟಡಗಳನ್ನು ಗುರುತಿಸಿರುವ ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 20:20 IST
Last Updated 7 ಜೂನ್ 2022, 20:20 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಮಂಜೂರಾತಿ ಪಡೆದ ನಕ್ಷೆ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳ ಬಗ್ಗೆ ಆರು ವರ್ಷಗಳಿಂದ ಸರ್ವೆ ನಡೆಸುತ್ತಿರುವ ಬಿಬಿಎಂಪಿ, ಶೇ 50ರಷ್ಟು ಕಟ್ಟಡಗಳನ್ನಷ್ಟೇ ಸರ್ವೆ ಮಾಡಿದೆ.

‘2016ರ ಜನವರಿ 1ರಿಂದ ಸರ್ವೆ ಕಾರ್ಯ ಆರಂಭಿಸಲಾಯಿತು. ನಕ್ಷೆ ಉಲ್ಲಂಘಿಸಿರುವ 36,759 ಕಟ್ಟಡಗಳನ್ನು ಗುರುತಿಸಲಾಗಿದ್ದು, ಅವುಗಳ ಪೈಕಿ 16,086 ಕಟ್ಟಡಗಳ ಸರ್ವೆ ಪೂರ್ಣಗೊಳಿಸಲಾಗಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಯೋಜನೆ) ಪಿ.ಎನ್.ರವೀಂದ್ರ ತಿಳಿಸಿದರು.

‘ಮಂಜೂರಾತಿಯನ್ನೇ ಪಡೆಯದೆ ಕಟ್ಟಡ ನಿರ್ಮಿಸಿರುವ 1,81,236 ಕಟ್ಟಡಗಳನ್ನು ಗುರುತಿಸಲಾಗಿದೆ. ಅವುಗಳ ಸರ್ವೆ ಕಾರ್ಯವನ್ನು ಪೂರ್ಣಗೊಳಿಸುವುದು ನಮ್ಮ ಮೊದಲ ಆದ್ಯತೆ. ಈ ಕಾರ್ಯವನ್ನು ಚುರುಕುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ’ ಎಂದೂ ಹೇಳಿದರು.

ADVERTISEMENT

3 ಲಕ್ಷ ಬೀದಿನಾಯಿ: ‘ಬಿಬಿಎಂಪಿ ವ್ಯಾಪ್ತಿಯಲ್ಲಿ 3 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳಿವೆ ಎಂದು ಗುರುತಿಸಲಾಗಿದ್ದು, ಶೇ 70ರಷ್ಟು ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನಿತ್ಯ 240 ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ’ ಎಂದು ರವೀಂದ್ರ ತಿಳಿಸಿದರು.

‘ರೇಬಿಸ್ ಶಂಕಿತ ನಾಯಿಗಳಿದ್ದರೆ ಮಾಹಿತಿ ನೀಡಲು ಸಹಾಯವಾಣಿ (6364893322) ತೆರೆಯಲಾಗಿದೆ. ತಿಂಗಳಿಗೆ ಸರಾಸರಿ 10 ಪ್ರಕರಣಗಳು ವರದಿಯಾಗುತ್ತಿವೆ’ ಎಂದು ಹೇಳಿದರು.

ಪ್ರಹ್ಲಾದ್ ವಿರುದ್ಧದ ದೂರು: ವಾರದಲ್ಲಿ ವರದಿ
‘ರಸ್ತೆ ಗುಂಡಿ ಮುಚ್ಚಲು ಪೈಥಾನ್ ಯಂತ್ರ ಪೂರೈಸಿರುವ ಅಮೆರಿಕ್ ರೋಡ್ ಟೆಕ್ನಾಲಜೀಸ್ ಸಲ್ಯೂಷನ್ಸ್‌(ಎಆರ್‌ಟಿಸಿ) ಕಂಪನಿಯ ನಿರ್ದೇಶಕರ ಮೇಲೆ ಬಿಬಿಎಂಪಿ ಮುಖ್ಯ ಎಂಜಿನಿಯರ್‌ (ರಸ್ತೆ ಮೂಲಸೌಕರ್ಯ) ಬಿ.ಎಸ್.ಪ್ರಹ್ಲಾದ್ ಹಲ್ಲೆ ನಡೆಸಿದ್ದಾರೆ ಎಂಬ ದೂರಿನ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪಿ.ಎನ್‌.ರವೀಂದ್ರ ತಿಳಿಸಿದರು. ‘ದೂರದಾರರು ಮತ್ತು ಪ್ರಹ್ಲಾದ್‌ ಅವರಿಗೆ ನೋಟಿಸ್ ನೀಡಲಾಗಿದೆ. ವಿಚಾರಣೆ ನಡೆಸಿ ವಾರದಲ್ಲಿ ಮುಖ್ಯ ಆಯುಕ್ತರಿಗೆ ವರದಿ ನೀಡಲಾಗುವುದು. ಪ್ರಹ್ಲಾದ್ ಅವರ ವಿರುದ್ಧ ಕ್ರಮ ಕೈಗೊಳ್ಳದಂತೆ ಯಾರಿಂದಲೂ ಒತ್ತಡ ಬಂದಿಲ್ಲ. ನ್ಯಾಯ ಸಮ್ಮತ ವಿಚಾರಣೆ ನಡೆಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.