ADVERTISEMENT

ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ: ಬೈಲಾ ಲೋಪಗಳೇ ಕಾರಣವೆಂದ ಶ್ರೀಕಾಂತ್ ಚನ್ನಾಳ್

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 19:20 IST
Last Updated 5 ಜುಲೈ 2022, 19:20 IST
ಶ್ರೀಕಾಂತ್ ಚನ್ನಾಳ್
ಶ್ರೀಕಾಂತ್ ಚನ್ನಾಳ್   

ಬೆಂಗಳೂರು: ‘ನಿಯಮ ಉಲ್ಲಂಘಿಸಿ ಕಟ್ಟಿರುವ ಕಟ್ಟಡಗಳು ನಗರದಲ್ಲಿ ಶೇ 95ರಷ್ಟಿವೆ. ಬಿಬಿಎಂಪಿ ಬೈಲಾದಲ್ಲಿ ಇರುವ ಲೋಪಗಳೇ ಇದಕ್ಕೆ ಪ್ರಮುಖ ಕಾರಣ’ ಎಂದು ಅಸೋಷಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್‌ ಸಂಸ್ಥೆಯ ಬೆಂಗಳೂರು ಕೇಂದ್ರದ ಅಧ್ಯಕ್ಷ ಶ್ರೀಕಾಂತ್ ಚನ್ನಾಳ್ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಕಟ್ಟಡ ಸಂಹಿತೆ(ಎನ್‌ಬಿಸಿ) ನಿಯಮಗಳನ್ನು ಬಿಬಿಎಂಪಿ ಬೈಲಾ–2020ರಲ್ಲಿ ಅಳವಡಿಕೆ ಮಾಡುವ ಅಗತ್ಯದ ಬಗ್ಗೆ ನಡೆದ ಅಧ್ಯಯನ ಸಭೆಯಲ್ಲಿ ಅವರು ಮಾತನಾಡಿದರು.

‘ಬಡವರು ಕಟ್ಟುವ ಸಣ್ಣ ಮನೆಗಳಿಗೆ ಫ್ಲೋರ್‌ ಏರಿಯಾ ರೇಷಿಯೊ (ಎಫ್‌ಎಆರ್‌) 1.75ರಷ್ಟು ಇದ್ದರೆ, ದೊಡ್ಡ ಕಟ್ಟಡಗಳಿಗೆ 3.25 ಇದೆ. ನಿವೇಶನಗಳ ಅಳತೆಗಿಂತ ಶೇ 1.75ರಷ್ಟು ಹೆಚ್ಚಿನ ಚದರ ಅಡಿಯಲ್ಲಿ ಬಡವರು ಮನೆ ಕಟ್ಟಿಕೊಳ್ಳಲು ಅವಕಾಶವಿದ್ದರೆ, ಶೇ 3.25ರಷ್ಟು ಹೆಚ್ಚಿನ ಚದರ ಅಡಿಯಲ್ಲಿ ನಿರ್ಮಿಸಲು ಅವಕಾಶ ನೀಡಲಾಗಿದೆ. ಅದಕ್ಕೆ ಎಲ್ಲರೂ ನಿಯಮ ಉಲ್ಲಂಘಿಸುತ್ತಿದ್ದಾರೆ’ ಎಂದರು.

ADVERTISEMENT

‘ನಕ್ಷ ಉಲ್ಲಂಘಿಸಿ ಕಟ್ಟಿರುವ ಮನೆ ಕೆಡವಲು ಮುಂದಾದರೆ, ಅದಕ್ಕೆ ಹಣ ಹೊಂದಿಸುವುದೇ ಕಷ್ಟ. ಅವಶೇಷಗಳನ್ನು ಎಲ್ಲಿ ಹಾಕಬೇಕು ಎಂಬ ಸಮಸ್ಯೆ ಎದುರಾಗಲಿದೆ’ ಎಂದರು.

‘ಈ ಸಮಸ್ಯೆ ಎದುರಾಗಲಿದೆ ಎಂಬ ಕಾರಣಕ್ಕೆ ಚೆನ್ನೈ ಹೈಕೋರ್ಟ್‌ ನಕ್ಷೆ ಉಲ್ಲಂಘಿಸಿ ಕಟ್ಟಡ ಕಟ್ಟಿದವರಿಂದ 5 ಪಟ್ಟು ಹೆಚ್ಚಿನ ವಿದ್ಯುತ್ ಶುಲ್ಕ ಮತ್ತು ನೀರಿನ ಶುಲ್ಕ ಪಡೆಯಲು ಆದೇಶಿಸಿದೆ. ನಕ್ಷೆ ಉಲ್ಲಂಘಿಸಿದವವರು ಎಷ್ಟು ದಂಡ ಪಾವತಿಸಬೇಕು ಎಂಬುದನ್ನೇ ಬಿಬಿಎಂಪಿ ನಿಗದಿ ಮಾಡಿಲ್ಲ. ಅದನ್ನು ಬೈಲಾದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

‘ನಕ್ಷೆಗೆ ಮಂಜೂರಾತಿ ನೀಡುವ ಪದ್ಧತಿ ಹೋಗಬೇಕಿದೆ. ಕಟ್ಟಡಗಳ ರಚನೆ, ಎಲೆಕ್ಟ್ರಿಕ್‌ ಮತ್ತು ಪ್ಲಂಬಿಂಗ್‌ಗೆ ಸಂಬಂಧಿಸಿದ ಡ್ರಾಯಿಂಗ್‌ಗಳನ್ನು ಮೊದಲೇ ಪಡೆಯಬೇಕು ಎಂದು ಎನ್‌ಬಿಸಿ ಹೊಸ ನಿಯಮಗಳು ಹೇಳುತ್ತಿವೆ’ ಎಂದು ಉಲ್ಲೇಖಿಸಿದರು.

‌‘ಬಿಬಿಎಂಪಿ ಸರ್ಕಾರಕ್ಕೆ ಸಲ್ಲಿಸಿರುವ ಕಟ್ಟಡ ಬೈಲಾದಲ್ಲಿ ಈ ಅಂಶಗಳು ಇಲ್ಲ. ಅವುಗಳನ್ನು ಸೇರ್ಪಡೆ ಕುರಿತು ಆರು ಸಂಸ್ಥೆಗಳು ಒಟ್ಟಾಗಿ ವರದಿ ಸಿದ್ಧಪಡಿಸುತ್ತಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.