ಬೆಂಗಳೂರು: ಕಂದಾಯ ಸಚಿವರು ಸೂಚನೆ ನೀಡಿ ಒಂದು ವರ್ಷವಾದರೂ ಅಕ್ರಮ ಖಾತಾ ರದ್ದುಪಡಿಸದ ಪೂರ್ವ ತಾಲ್ಲೂಕಿನ ತಹಶೀಲ್ದಾರ್ ಅವರಿಗೆ ನಗರ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯವರು ಮತ್ತೊಮ್ಮೆ ನೆನಪೋಲೆ ಕಳುಹಿಸಿದ್ದಾರೆ.
‘ಬಿಜೆಪಿ ಮುಖಂಡ ಎಂ.ಲಕ್ಷ್ಮೀನಾರಾಯಣ ಅವರ ಒತ್ತಡದಿಂದ ಸರ್ಕಾರಿ ಜಮೀನಿಗೆ ಅಕ್ರಮವಾಗಿ ಮಾಡಿಕೊಟ್ಟಿರುವ ನೋಂದಣಿ ಮತ್ತು ಖಾತೆಯನ್ನು ರದ್ದುಪಡಿಸಲು ಕೈಗೊಂಡಿರುವ ಕ್ರಮಗಳನ್ನು ಕೂಡಲೇ ತಿಳಿಸಬೇಕು’ ಎಂದು ನಗರ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯವರು ಪೂರ್ವ ತಾಲ್ಲೂಕಿನ ತಹಶೀಲ್ದಾರ್ ಅವರಿಗೆ 2025ರ ಜನವರಿ 7ರಂದು ಕಳುಹಿಸಿದರುವ ನೆನಪೋಲೆಯಲ್ಲಿ ಸೂಚಿಸಿದ್ದಾರೆ.
‘ಬಾಣಸವಾಡಿ ಗ್ರಾಮದ ಸರ್ವೆ ನಂ. 261ರ ಸರ್ಕಾರಿ ಜಮೀನಿನನ್ನು ಲಕ್ಷ್ಮೀನಾರಾಯಣರ ಒತ್ತಡದಿಂದ ಕೃಷ್ಣರಾಜಪುರದ ಉಪ ನೋಂದಣಾಧಿಕಾರಿ, ಪೂರ್ವ ತಾಲ್ಲೂಕಿನ ತಹಶೀಲ್ದಾರ್ ಅವರು ಉತ್ತರ ಉಪ ವಿಭಾಗದ ಉಪ ವಿಭಾಗಾಧಿಕಾರಿ ಅವರ ಸೂಚನೆ ಧಿಕ್ಕರಿಸಿ ನೋಂದಣಿ, ಖಾತಾ ಮಾಡಿದ್ದಾರೆ ಎಂದು ಎಂ.ಮುನಿರಾಜು ಅವರು ಕಂದಾಯ ಸಚಿವರಿಗೆ ದೂರು ಸಲ್ಲಿಸಿದ್ದರು. ಅದನ್ನು ಉಲ್ಲೇಖಿಸಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು 2023ರ ಡಿಸೆಂಬರ್ 11ರಂದು ಪತ್ರ ಬರೆದಿದ್ದರು’ ಎಂದು ನೆನಪೋಲೆಯಲ್ಲಿ ಉಲ್ಲೇಖಿಸಿದ್ದಾರೆ.
‘ಬಿಡಿಎ ಜಾಗ ಖಾಸಗಿಯವರಿಗೆ ಮಾರಾಟ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ 2023ರ ಡಿಸೆಂಬರ್ 8ರಂದು ಪ್ರಕಟವಾಗಿದ್ದ ವಿಶೇಷ ವರದಿ ಪ್ರಸ್ತಾಪಿಸಿರುವ ಹೆಚ್ಚುವರಿ ಜಿಲ್ಲಾಧಿಕಾರಿ, ‘ಅಕ್ರಮವನ್ನು ಮುಚ್ಚಿಹಾಕಲು ತೆರೆ–ಮರೆಯಲ್ಲಿ ಪ್ರಯತ್ನಿಸಲಾಗುತ್ತಿದೆ. ಸರ್ಕಾರಿ ಜಮೀನನ್ನು ಉಳಿಸಬೇಕೆಂದು ಮನವಿದಾರರು ಕೋರಿದ್ದು, ನಿಯಮಾನುಸಾರ ಕ್ರಮ ಕೈಗೊಂಡು, ಅದನ್ನು ವರದಿ ಮಾಡಿ ತಿಳಿಸಬೇಕು. ಈವರೆಗೆ ಕಾನೂನು ರೀತಿ ಕೈಗೊಂಡ ಕ್ರಮದ ಬಗ್ಗೆ ಮನವಿದಾರರಿಗೂ ಮಾಹಿತಿ ನೀಡಬೇಕು’ ಎಂದು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.