ADVERTISEMENT

ಅಕ್ರಮ ನೀರು ಬಳಕೆದಾರರ ಮೇಲೆ ಕ್ರಮ: ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 0:53 IST
Last Updated 20 ನವೆಂಬರ್ 2025, 0:53 IST
ರೋಬೋಟಿಕ್ ಎಐ ತಂತ್ರಜ್ಞಾನದ ಮೂಲಕ ಒಳಚರಂಡಿಯ ಹೂಳೆತ್ತುವ ಯಂತ್ರ.
ರೋಬೋಟಿಕ್ ಎಐ ತಂತ್ರಜ್ಞಾನದ ಮೂಲಕ ಒಳಚರಂಡಿಯ ಹೂಳೆತ್ತುವ ಯಂತ್ರ.   

ಬೆಂಗಳೂರು: ತಂತ್ರಜ್ಞಾನ ಹಾಗೂ ವಿಶೇಷ ಪಡೆ ಬಳಸಿ ನೀರಿನ ಸೋರಿಕೆ ಹಾಗೂ ಅಕ್ರಮ ಬಳಕೆಗೆ ತಡೆಯೊಡ್ಡಲಾಗುತ್ತಿದೆ. ಹೀಗಿದ್ದರೂ ಅಕ್ರಮ ಸಂಪರ್ಕ ಪಡೆದಿರುವವರ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದರು.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಕ್ರಮ ಸಂಪರ್ಕ ಪತ್ತೆ ಮತ್ತು ನೀರಿನ ಸೋರಿಕೆ ತಡೆಗೆ ನೂತನವಾಗಿ ರಚಿಸಿರುವ ನೀಲಿ ಪಡೆ ಮತ್ತು ರೋಬೋಟಿಕ್ ತಂತ್ರಜ್ಞಾನ ಅಳವಡಿಕೆ ಯೋಜನೆಗಳಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ಬೆಂಗಳೂರಿನ ಜನರಿಗೆ ಪರಿಶುದ್ಧ ನೀರು ನೀಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಅಕ್ರಮ ನೀರು ಸೋರಿಕೆಗೆ ಕಡಿವಾಣ ಹಾಕುವ ಮೂಲಕ, ಕಲುಷಿತ ನೀರು ಪತ್ತೆ ಹಚ್ಚಿ ಪರಿಶುದ್ಧ ನೀರು ನೀಡುವ ನಿಟ್ಟಿನಲ್ಲಿ ಬೆಂಗಳೂರು ಜಲ ಮಂಡಳಿ ಅಳವಡಿಸಿಕೊಂಡಿರುವ ನೂತನ ರೋಬೋಟಿಕ್ ತಂತ್ರಜ್ಞಾನ ದೇಶಕ್ಕೆ ಮಾದರಿ ಎಂದು ಹೇಳಿದರು.

ADVERTISEMENT

ಅನವಶ್ಯಕವಾಗಿ ರಸ್ತೆ ಅಗೆತಗಳನ್ನು ತಡೆಗಟ್ಟುವ ಅಗತ್ಯ ಹೆಚ್ಚಾಗಿದೆ. ಆ ಮೂಲಕ ರಸ್ತೆ ಗುಂಡಿಯಾಗುವುದನ್ನು ನಿಯಂತ್ರಿಸಲು ರೋಬೋಟಿಕ್ ತಂತ್ರಜ್ಞಾನ ಉಪಯೋಗವಾಗಲಿದೆ. ಇದನ್ನು ಕೇಂದ್ರ ಸರ್ಕಾರ ಕೂಡ ಒಪ್ಪಿಕೊಂಡಿದೆ ಎಂದು ಹೇಳಿದರು.

ಇದೇ ವೇಳೆ ನಗರದ ಹಲವು ಕಡೆಗಳಲ್ಲಿ ರೋಬೋಟಿಕ್ ಎಐ ತಂತ್ರಜ್ಞಾನದ ಮೂಲಕ ಒಳಚರಂಡಿಯ ಹೂಳೆತ್ತುವ ಯಂತ್ರವನ್ನು ಪರಿಶೀಲಿಸಲಾಯಿತು.

ಶಾಸಕ ರಿಜ್ವಾನ್‌ ಅರ್ಷದ್‌, ಜಲಮಂಡಳಿಯ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್, ಆಡಳಿತಧಿಕಾರಿ ಮದನ್ ಮೋಹನ್, ಪ್ರಧಾನ ಮುಖ್ಯ ಎಂಜಿನಿಯರ್ ಬಿ.ಎಸ್.ದಲಾಯತ್ ಉಪಸ್ಥಿತರಿದ್ದರು.

ಬಳಕೆ ಹೇಗೆ?

ಮಂಡಳಿಯು ಅಳವಡಿಸಿಕೊಂಡಿರುವ ರೊಬ್ಯಾಟಿಕ್ ಎಐ ತಂತ್ರಜ್ಞಾನದ ಆಧಾರಿತ ಮೂಲಕ ನೀರಿನ ಸೋರಿಕೆಯನ್ನು ಪತ್ತೆ ಹಚ್ಚಿ ಅದರ ಮಾಹಿತಿಯನ್ನು ಮಂಡಳಿ ಡ್ಯಾಶ್ ಬೋರ್ಡ್‌ಗೆ ಕಳುಹಿಸಲಿದೆ. ಈ ಮಾಹಿತಿ ಆಧಾರಿತವಾಗಿ ಮಂಡಳಿ ತಕ್ಷಣ ಕಾರ್ಯ ಪ್ರವೃತ್ತವಾಗಲಿರುವ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.