ADVERTISEMENT

‘ವನ್ಯಜೀವಿ ಧಾಮ: ಅಕ್ರಮ ರಸ್ತೆ ವಿಸ್ತರಣೆ’

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2019, 20:12 IST
Last Updated 14 ಮಾರ್ಚ್ 2019, 20:12 IST
ವನ್ಯಜೀವಿಧಾಮದಲ್ಲಿ ರಸ್ತೆ ಕಾಮಗಾರಿ
ವನ್ಯಜೀವಿಧಾಮದಲ್ಲಿ ರಸ್ತೆ ಕಾಮಗಾರಿ   

ಬೆಂಗಳೂರು: ಕಾವೇರಿ ವನ್ಯಜೀವಿ ಧಾಮದ ವ್ಯಾಪ್ತಿಯ ಕನಕಪುರ ತಾಲ್ಲೂಕಿನ ಭೂಹಳ್ಳಿಯಿಂದ ಮುತ್ತತ್ತಿಗೆ ಹೋಗುವ ರಸ್ತೆಯನ್ನು ಅಕ್ರಮವಾಗಿ ವಿಸ್ತರಣೆ ಮಾಡಲಾಗುತ್ತಿದೆ ಎಂದು ವನ್ಯಜೀವಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವನ್ಯಜೀವಿಧಾಮದ ಹಲಗೂರು ವಲಯದಲ್ಲಿ ಹಾದುಹೋಗುವ ಈ ರಸ್ತೆ ಭೂಹಳ್ಳಿ ಚೆಕ್‌ಪೋಸ್ಟ್‌ನಿಂದ ಮುತ್ತತ್ತಿಯವರೆಗೆ ಸುಮಾರು 13 ಕಿ.ಮೀ. ಉದ್ದವಿದೆ. ಇರುವ ರಸ್ತೆಯನ್ನು ದುರಸ್ತಿ ಮಾಡಲು ಯಾವುದೇ ಕಾನೂನಿನ ತೊಡಕು ಇಲ್ಲದಿದ್ದರೂ ವನ್ಯಜೀವಿಧಾಮದೊಳಗೆ ರಸ್ತೆ ವಿಸ್ತರಣೆಗೆ ಕಾನೂನು ಪ್ರಕ್ರಿಯೆಗಳಿವೆ. ಆದರೆ, ಇಲ್ಲಿ ಒಪ್ಪಿಗೆ ಪಡೆಯದೆ ವಿಸ್ತರಣೆ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.

ರಸ್ತೆ ವಿಸ್ತರಣೆಗೆ ರಾಷ್ಟ್ರೀಯ ಹಾಗೂ ರಾಜ್ಯ ವನ್ಯಜೀವಿ ಮಂಡಳಿಗಳ ಅನುಮತಿಯ ಅಗತ್ಯವಿದೆ. ಅಲ್ಲದೆ, ಕೇಂದ್ರ ಸರ್ಕಾರದ ಪರಿಸರ ಸಚಿವಾಲಯದ 2014ರ ಮಾರ್ಗಸೂಚಿ, ‘ರಾಷ್ಟ್ರೀಯ ಉದ್ಯಾನ ಹಾಗೂ ವನ್ಯಜೀವಿಧಾಮಗಳಲ್ಲಿರುವ ಡಾಂಬರು ರಸ್ತೆಗಳನ್ನು ವಿಸ್ತರಣೆ ಮಾಡಬಾರದು’ ಎಂದು ತಿಳಿಸಲಾಗಿದೆ ಎಂದು ಅವರು ಗಮನ ಸೆಳೆದಿದ್ದಾರೆ.

ADVERTISEMENT

‘ರಸ್ತೆ ವಿಸ್ತರಣೆ ಕಾಮಗಾರಿಯನ್ನು ಡಿಸೆಂಬರ್‌ನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ತಡೆದು, ಕಾಮಗಾರಿಗೆ ಬಳಸುತ್ತಿದ್ದ ಯಂತ್ರಗಳು ಹಾಗೂ ವಾಹನಗಳನ್ನು ಜಪ್ತಿ ಮಾಡಿದ್ದರು. ಆದರೆ, ಸ್ಥಳೀಯ ಸಂಸದರು ಹಾಗೂ ಶಾಸಕರು ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರಿದ್ದರಿಂದ ಕಳೆದ ವಾರ ಕಾಮಗಾರಿ ಮತ್ತೆ ಆರಂಭವಾಗಿದೆ’ ಎಂದು ಅವರು ದೂರಿದ್ದಾರೆ.

ಕಾವೇರಿ ವನ್ಯಜೀವಿಧಾಮ ಅನೇಕ ವನ್ಯಜೀವಿಗಳ ಆವಾಸಸ್ಥಾನವಾಗಿದೆ. ಅದರಲ್ಲೂ, ಈ ರಸ್ತೆ ನಿರ್ಮಾಣವಾಗುತ್ತಿರುವ ಪ್ರದೇಶ ಆನೆಗಳ ಪ್ರಮುಖ ಆವಾಸಸ್ಥಾನ. ಈ ಪ್ರದೇಶದಲ್ಲಿ ಮಾನವ– ಆನೆ ಸಂಘರ್ಷ ಅತಿಯಾಗಿದೆ. ಇಂತಹ ಸಂದರ್ಭದಲ್ಲಿ ಆನೆಗಳ ಆವಾಸಸ್ಥಾನವನ್ನು ಛಿದ್ರಗೊಳಿಸುವುದು ಮತ್ತಷ್ಟು ಸಂಘರ್ಷಕ್ಕೆ ಆಹ್ವಾನ ಕೊಟ್ಟಂತೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.