ADVERTISEMENT

ಪ್ರಮುಖ ಹೆದ್ದಾರಿಗಳಲ್ಲಿ ‘ಸ್ಮಾರ್ಟ್‌ ಸಿಸ್ಟಂ’ ಅಳವಡಿಕೆ: ಸಿಎಂ ಸಿದ್ದರಾಮಯ್ಯ

2030ರ ವೇಳೆಗೆ ಶೇ. 50ರಷ್ಟು ಅಪಘಾತ ಕಡಿಮೆ ಮಾಡುವ ಗುರಿ: ಸಿ.ಎಂ.

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 15:30 IST
Last Updated 24 ಸೆಪ್ಟೆಂಬರ್ 2024, 15:30 IST
ಬೆಂಗಳೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ‘ಸೇಫ್‌’ ವಾರ್ಷಿಕ ಸಮ್ಮೇಳನದಲ್ಲಿ ಅತ್ತಿಬೆಲೆ ಸರ್ಕಾರಿ ಮಾದರಿ ಪ್ರಾಥಮಿಕ ಬಾಲಕರ  ಶಾಲೆ ವಿದ್ಯಾರ್ಥಿಗಳು ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.  
ಬೆಂಗಳೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ‘ಸೇಫ್‌’ ವಾರ್ಷಿಕ ಸಮ್ಮೇಳನದಲ್ಲಿ ಅತ್ತಿಬೆಲೆ ಸರ್ಕಾರಿ ಮಾದರಿ ಪ್ರಾಥಮಿಕ ಬಾಲಕರ  ಶಾಲೆ ವಿದ್ಯಾರ್ಥಿಗಳು ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.     

ಬೆಂಗಳೂರು: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ‘ಸ್ಮಾರ್ಟ್‌ ಸಿಸ್ಟಂ’ ಅಳವಡಿಕೆಯಿಂದ ಅಪಘಾತಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ರಾಜ್ಯದ ಪ್ರಮುಖ ರಸ್ತೆಗಳು ಮತ್ತು ಹೆದ್ದಾರಿಗಳಲ್ಲೂ ಈ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಭಾರತೀಯ ಆಟೊಮೊಬೈಲ್ ತಯಾರಕರ ಒಕ್ಕೂಟ ‘ನಮ್ಮ ರಸ್ತೆಗಳು ನಮ್ಮ ಜವಾಬ್ದಾರಿ’ ವಿಚಾರದ ಮೇಲೆ ಮಂಗಳವಾರ ಹಮ್ಮಿಕೊಂಡಿದ್ದ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

‘ಸ್ಮಾರ್ಟ್‌ ಸಿಸ್ಟಂ’ (ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ಸಂಚಾರ ನಿಯಮ ಉಲ್ಲಂಘನೆಯನ್ನು ಪತ್ತೆ ಹಚ್ಚುವುದು) ಅಳವಡಿಸುವ ಜೊತೆಗೆ, ಪಾದಚಾರಿಗಳು, ಸೈಕಲ್ ಸವಾರರು, ವಾಹನ ಸವಾರರು ಸೇರಿದಂತೆ ಪ್ರತಿಯೊಬ್ಬರಿಗೂ ರಸ್ತೆಗಳು ಸುರಕ್ಷಿತವಾಗಿರುವುದನ್ನು ಖಾತ್ರಿಪಡಿಸುವುದು ನಮ್ಮ ಗುರಿ ಎಂದು ಹೇಳಿದರು.

ADVERTISEMENT

ಕಳೆದ ವರ್ಷ ದೇಶದಲ್ಲಿ 1.68 ಲಕ್ಷಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿ, ಸಾವು–ನೋವು ಉಂಟಾಗಿದೆ. ಅಪಘಾತಗಳಿಂದ ಉಂಟಾಗುವ ಜೀವ ಹಾನಿಯು ಜನರ ಜೀವನ ಮತ್ತು ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ.  ಮೂಲಸೌಕರ್ಯ ಅಭಿವೃದ್ಧಿ, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗುವುದು ಎಂದರು.‌

ಮುಂದಿನ ಎರಡು ವರ್ಷಗಳಲ್ಲಿ ಐದು ಸಾವಿರ ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲು ಯೋಜಿಸಿದ್ದೇವೆ. ಇದರಿಂದ ಗಾಳಿಯ ಗುಣಮಟ್ಟ ಮತ್ತು ಜನರ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ.
ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

‘ವರ್ಷದಿಂದ ವರ್ಷಕ್ಕೆ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆ ಆಗಲಿದೆ ಎಂಬ ವಿಶ್ವಾಸ ಇದೆ. 2030ರ ವೇಳೆಗೆ ಶೇಕಡ 50ರಷ್ಟು ಕಡಿಮೆ ಮಾಡುವ ಗುರಿ ಹೊಂದಿದ್ದೇವೆ’ ಎಂದು ಹೇಳಿದರು.

ಮೂರು ಕೋಟಿ ವಾಹನ: ದೇಶದಲ್ಲಿ ಜನಸಂಖ್ಯೆ, ವಾಹನ ಸಂಖ್ಯೆ ಎರಡೂ ಹೆಚ್ಚುತ್ತಿವೆ. ಅಂತರರಾಷ್ಟ್ರೀಯ ರಸ್ತೆ ಸುರಕ್ಷತೆ ಮಾದರಿ ನಮ್ಮಲ್ಲೂ ಬರಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.

‘ಪ್ರತೀ ನಾಗರಿಕನೂ ಸ್ವಂತ ವಾಹನ ಹೊಂದುವ ಕನಸು ಕಂಡಿರುತ್ತಾನೆ. ಶೇಕಡಾ 30ರಿಂದ 35ರಷ್ಟು ಜನ ಮಾತ್ರ ಸಾರ್ವಜನಿಕ ಸಾರಿಗೆ ಬಳಸುತ್ತಿದ್ದಾರೆ. ಕರ್ನಾಟಕದಲ್ಲಿ ಮೂರು ಕೋಟಿ ವಾಹನಗಳಿವೆ. ಬೆಂಗಳೂರಿನ ಜನಸಂಖ್ಯೆ 1.50 ಕೋಟಿ ಇದ್ದರೆ, ವಾಹನ ಸಂಖ್ಯೆ 1.04 ಕೋಟಿಯಿದೆ. ಸಂಚಾರ ದಟ್ಟಣೆ ನಿವಾರಣೆಗೆ ಪೆರಿಫೆರಲ್ ರಿಂಗ್ ರೋಡ್ ಹಾಗೂ ಸುರಂಗ ರಸ್ತೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ’ ಎಂದು ಹೇಳಿದರು. 

ಟಾಟಾ ಮೋಟರ್ಸ್ ಗ್ಲೋಬಲ್ ಹೆಡ್ ಮತ್ತು ಸೇಫ್ ಅಧ್ಯಕ್ಷ ಸುಶಾಂತ್ ನಾಯ್ಕ್, ಉಪಾಧ್ಯಕ್ಷ ಅಲೋಕ್‌ ಜೇಟ್ಲಿ, ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ. ಪ್ರಸಾದ್  ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.