ADVERTISEMENT

ಮೈ ಮೇಲೆ ದೇವರು ಬರುತ್ತಾನೆಂದು ವಂಚನೆ

₹27.50 ಕೋಟಿ ಮೌಲ್ಯದ ಚಿನ್ನ, ಜಮೀನು, ನಗದು ಕಳೆದುಕೊಂಡ ಮಹಿಳೆಯಿಂದ ದೂರು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 20:18 IST
Last Updated 25 ಫೆಬ್ರುವರಿ 2020, 20:18 IST

ಬೆಂಗಳೂರು: ಮೈ ಮೇಲೆ ದೇವಿ ಬರುತ್ತಾಳೆಂದು ನಂಬಿಸಿ, ಮಹಿಳೆಯೊಬ್ಬರಿಂದ ₹ 27.50 ಕೋಟಿ ಮೌಲ್ಯದ ಚಿನ್ನ, ಜಮೀನು ಮತ್ತು ನಗದು ಪಡೆದು ವಂಚಿಸಿದ ಆರೋಪದಲ್ಲಿ ಮಂತ್ರವಾದಿ, ಆತನ ಪತ್ನಿ ಸೇರಿ ಒಟ್ಟು ಆರು ಮಂದಿಯ ವಿರುದ್ಧ ರಾಮಮೂರ್ತಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಎನ್‌ಆರ್‌ಐ ಲೇಔಟ್‌ನ ಮಹಿಳೆ ನೀಡಿದ ದೂರಿನ ಮೇಲೆ ನಾಗರಾಜ್‌, ಆತನ ಪತ್ನಿ ಲಕ್ಷ್ಮಮ್ಮ, ಸಂಬಂಧಿಗಳಾದ ಪೆರುಮಾಳ್‌, ದೇವರಾಜ್‌, ಹೊಸೂರು ಮಂಜು ಮತ್ತು ಸಾಯಿಕೃಷ್ಣ ಎಂಬುವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಮಹಿಳೆಯ ಪತಿ 2009ರಲ್ಲಿ ಮೃತಪಟ್ಟಿದ್ದು, ಮೂವರು ಗಂಡು ಮಕ್ಕಳಿದ್ದಾರೆ. ಈಕೆಯ ಪತಿ ಎರಡನೇ ಪತ್ನಿಯ ಮಗನೆಂದು ಹೇಳಿಕೊಂಡು ಬಂದಿದ್ದ ವ್ಯಕ್ತಿಯೊಬ್ಬ ಆಸ್ತಿಯಲ್ಲಿ ಪಾಲು ಕೇಳಿದ್ದ. ಅಲ್ಲದೆ, ಸಂಬಂಧಿಕರ ಕಿರಿಕಿರಿಯಿಂದ ನೊಂದಿದ್ದ ಮಹಿಳೆ, ಮಾನಸಿಕ ನೆಮ್ಮದಿ ಬಯಸಿ ಪರಿಚಿತರೊಬ್ಬರ ಮೂಲಕ 2014ರ ಆಗಸ್ಟ್‌ನಲ್ಲಿ ಬಂಗಾರಪೇಟೆ ನಾಗರಾಜನ ಬಳಿಗೆ ಹೋಗಿದ್ದರು.

ADVERTISEMENT

‘ಸೊಲ್ಲಪುರದಮ್ಮ ದೇವಸ್ಥಾನದಲ್ಲಿ ಪೂಜಾರಿಯಾಗಿದ್ದ ನಾಗರಾಜ, ನನಗೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಮೈ ಮೇಲೆ ದೇವಿ ಬರುತ್ತಾಳೆ. ಅವಳು ಹೇಳಿದಂತೆ ನಡೆದುಕೊಂಡರೆ, ನಿಮ್ಮ ಸಂಕಷ್ಟಗಳೆಲ್ಲ ದೂರವಾಗುತ್ತದೆ. ಇಲ್ಲದಿದ್ದರೆ ನಿಮ್ಮ ಪತಿಯಂತೆ ಮಕ್ಕಳೂ ಅಕಾಲಿಕವಾಗಿ ಸಾವಿಗೀಡಾಗುತ್ತಾರೆ’ ಎಂದು ಹೇಳಿದ್ದ.

‘2014ರ ಒಂದು ದಿನ ನನ್ನ ಮನೆಗೆ ಬಂದ ನಾಗರಾಜ್, ‘ಪೂಜೆ ಮಾಡಿದ ಬಳಿಕ ಮೈ ಮೇಲೆ ದೇವರು ಬಂದಂತೆ ನಟಿಸಿದ ಆತ, ನಿಮ್ಮ ಮನೆಯಲ್ಲಿ ಚಿನ್ನದ ಗಟ್ಟಿ ಇದೆ. ಅದನ್ನು ನನಗೆ ಕೊಡಬೇಕು’ ಎಂದು ಬೆದರಿಸಿದ. ಮೂರೂ ಮಕ್ಕಳ ಹೆಸರಿನಲ್ಲಿದ್ದ 3 ಕೆ.ಜಿ ಚಿನ್ನದ ಗಟ್ಟಿಯನ್ನು ಅವನಿಗೆ ನೀಡಿದೆ. ಆನಂತರ, ನಾನು ಹೇಳಿದವರಿಗೆ, ಹೇಳಿದ ಮೊತ್ತಕ್ಕೆ ನಿಮ್ಮ ಜಮೀನು ಮಾರಿ. ಅದರಿಂದ ಬಂದ ಹಣವನ್ನು ನನಗೆ ಕೊಡಿ. ಆ ಹಣವನ್ನು ಬೇರೆ ಕಡೆ ಹೂಡಿಕೆ ಮಾಡಿ, ದ್ವಿಗುಣಗೊಳಿಸುತ್ತೇನೆ’ ಎಂದು ಹೇಳಿದ್ದ.

‘ಅವನನ್ನು ನಂಬಿ 2015ರ ಫೆಬ್ರುವರಿಯಿಂದ 2019ರವರೆಗೆ ವಿವಿಧ ಹಂತಗಳಲ್ಲಿ ಆಸ್ತಿಯನ್ನೆಲ್ಲ ಮಾರಿದೆ. ಅದರಿಂದ ಬಂದ ₹ 22.50 ಕೋಟಿ ಮತ್ತು ಪತಿಯ ಹೆಸರಿನಲ್ಲಿದ್ದ ₹ 5 ಕೋಟಿ ಹಣವನ್ನು ನಾಗರಾಜ್‌ ಪಡೆದುಕೊಂಡಿದ್ದ. ನಮ್ಮ ಆಸ್ತಿ ಮಾರಿದ ವಿವರಗಳನ್ನೆಲ್ಲ ಡೈರಿಯಲ್ಲಿ ಬರೆದಿಟ್ಟಿದ್ದೇನೆ’.

‘2019ರ ಜನವರಿಯಲ್ಲಿ ಅವನ ಮನೆಗೆ ತೆರಳಿ ಏರಿದಧ್ವನಿಯಿಂದ ಕೇಳಿದಾಗ, ಬಂಗಾರಪೇಟೆಯ ಬೂದಿಕೋಟೆ ಗಾಜಿಗೆ ಎಂಬಲ್ಲಿ ನಿಮ್ಮ ಹೆಸರಿನಲ್ಲಿ ₹10 ಕೋಟಿ ಮೌಲ್ಯದ ಆರೂವರೆ ಎಕರೆ ಜಾಗ ಖರೀದಿಸಿದ್ದೇನೆ. ಆದರೆ, ಆ ಜಾಗದ ಮೇಲೆ ಡಿಸಿಸಿ ಬ್ಯಾಂಕಿನಿಂದ ಸಾಲ ಪಡೆದಿದ್ದೇನೆ. ಸಾಲದಲ್ಲಿ ಸ್ವಲ್ಪ ಭಾಗ ತೀರಿಸಿದರೆ, ಜಾಗವನ್ನು ನಿಮಗೆ ಬರೆದುಕೊಡುತ್ತೇನೆ ಎಂದಿದ್ದ. ನಮ್ಮಲ್ಲಿ ಹಣ ಇಲ್ಲದ ಕಾರಣದ ಮನೆಯಲ್ಲಿದ್ದ 450 ಗ್ರಾಂ ಚಿನ್ನವನ್ನು ಬಂಗಾರಪೇಟೆಗೆ ತರಿಸಿಕೊಂಡ ನಾಗರಾಜ, ತನ್ನ ಸಂಬಂಧಿ ಪೆರುಮಾಳ್ ಹೆಸರಿನಲ್ಲಿ ಅಡವಿಟ್ಟಿದ್ದ. ಅದರಿಂದ ಬಂದ ಹಣ ಪಡೆದುಕೊಂಡು ಆ ಜಾಗವನ್ನು ನಮ್ಮ ಹೆಸರಿಗೆ ಬರೆದುಕೊಟ್ಟಿದ್ದಾನೆ. ಆದರೆ, ಈ ಜಾಗ ದರ ₹ 1 ಕೋಟಿ ಕೂಡಾ ಆಗುವುದಿಲ್ಲ’ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

‘ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.