
ಬೆಂಗಳೂರು: ರಿಯಲ್ ಎಸ್ಟೇಟ್ ಕಂಪನಿ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ, ಉದ್ಯಮಿ ಸಿ.ಜೆ. ರಾಯ್ ಅವರಿಗೆ ಶತ್ರುಗಳಾಗಲಿ, ಬೆದರಿಕೆಯಾಗಲಿ ಇರಲಿಲ್ಲ. ಅವರು ಖಿನ್ನತೆಯಿಂದಲೂ ಬಳಲುತ್ತಿರಲಿಲ್ಲ ಎಂದು ರಾಯ್ ಸಹೋದರ ಸಿ.ಜೆ. ಬಾಬು ತಿಳಿಸಿದ್ದಾರೆ.
ಶನಿವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ರಾಯ್‌ಗೆ ಶತ್ರುಗಳು, ಬೆದರಿಕೆ ಇರಲಿಲ್ಲ. ಖಿನ್ನತೆಯಿಂದಲೂ ಅವರು ಬಳಲುತ್ತಿರಲಿಲ್ಲ. ಆದರೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳ ದಾಳಿ ಹಿನ್ನೆಲೆಯಲ್ಲಿ ಅವರು ಒತ್ತಡದಲ್ಲಿದ್ದರು ಎಂದು ಬಾಬು ತಿಳಿಸಿದರು.
ಕಳೆದ ಮೂರು ದಿನಗಳಿಂದ ಐಟಿ ದಾಳಿ ನಡೆದಿತ್ತು. ಕೊಚ್ಚಿಯಿಂದ ಆಗಮಿಸಿದ್ದ ಐಆರ್‌ಎಸ್ ಅಧಿಕಾರಿ ಕೃಷ್ಣ ಪ್ರಸಾದ್ ನೇತೃತ್ವದಲ್ಲಿ ದಾಳಿ ನಡೆದಿತ್ತು ಎಂದು ಅವರು ದೃಢಪಡಿಸಿದರು. ತನಿಖೆ ಪ್ರಕ್ರಿಯೆಗಳ ಕಾರಣದಿಂದ ಅವರು ತೀವ್ರ ಒತ್ತಡದಲ್ಲಿದ್ದರು ಎಂದು ಬಾಬು ಹೇಳಿದರು.
ಶುಕ್ರವಾರ ಬೆಳಗ್ಗೆ 10:40ರ ವೇಳೆಗೆ ರಾಯ್ ತಮಗೆ ಎರಡು ಬಾರಿ ಕರೆ ಮಾಡಿದ್ದರು. ಐಟಿ ಅಧಿಕಾರಿಗಳ ಒತ್ತಡವಿದ್ದು ತಕ್ಷಣ ಇಲ್ಲಿಗೆ ಬರುವಂತೆ ಹೇಳಿದ್ದರು. ಸಂಪೂರ್ಣ ತನಿಖೆ ನಡೆದು, ಸತ್ಯ ಹೊರಬರಲಿ ಎಂದು ಅವರಿಗೆ ಫೋನಿನಲ್ಲಿ ಹೇಳಿದ್ದೆ. ನಾನು ಬೇರೆ ಕಡೆ ಇದ್ದರಿಂದ ತಕ್ಷಣಕ್ಕೆ ಬೆಂಗಳೂರಿಗೆ ಬರಲು ಸಾಧ್ಯವಾಗಲಿಲ್ಲ ಎಂದರು.
ತನಿಖೆ ಭಾಗವಾಗಿ ಬೆಂಗಳೂರಿನ ಅಶೋಕನಗರ ಪೊಲೀಸರು ರಾಯ್ ಅವರಿಗೆ ಸೇರಿದ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕಾನ್ಫಿಡೆಂಟ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಟಿ.ಎ. ಜೋಸೆಫ್ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ, ಎಲ್ಲ ಆಯಾಮಗಳಿಂದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.