ADVERTISEMENT

ಕಾಡಲಾರಂಭಿಸಿದ ಉಸಿರಾಟದ ಸಮಸ್ಯೆ; ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಹೆಚ್ಚಳ

ವಾತಾವರಣದ ವೈಪರೀತ್ಯಕ್ಕೆ ಕಳವಳ

ವರುಣ ಹೆಗಡೆ
Published 6 ಜನವರಿ 2021, 22:22 IST
Last Updated 6 ಜನವರಿ 2021, 22:22 IST
ಉಸಿರಾಟದ ಸಮಸ್ಯೆ–ಪ್ರಾತಿನಿಧಿಕ ಚಿತ್ರ
ಉಸಿರಾಟದ ಸಮಸ್ಯೆ–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖ ಕಂಡರೂ ಒಂದು ವಾರದಿಂದ ತೀವ್ರ ಉಸಿರಾಟದ ಸಮಸ್ಯೆಯ (ಸಾರಿ) ಕಾರಣ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡಿದೆ.

ಕೋವಿಡ್‌ ಕಾಣಿಸಿಕೊಂಡ ಪ್ರಾರಂಭಿಕ ತಿಂಗಳಲ್ಲಿ ಸಾರಿ ಮತ್ತು ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಗೆ (ಐಎಲ್‌ಐ) ಒಳಪಟ್ಟವರಲ್ಲಿ ಶೇ 50ರಷ್ಟು ಮಂದಿ ಕೋವಿಡ್ ಪೀಡಿತರಾಗಿದ್ದರು. ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆ, ಕೆ.ಸಿ. ಜನರಲ್ ಸೇರಿದಂತೆ ನಗರದ ವಿವಿಧ ಆಸ್ಪತ್ರೆಗಳಲ್ಲಿ ಸಾರಿ ಮತ್ತು ಐಎಲ್‌ಐ ಸಮಸ್ಯೆಗೆ ಪ್ರತ್ಯೇಕವಾಗಿ ಹಾಸಿಗೆಗಳನ್ನು ಮೀಸಲಿಡಲಾಗಿದೆ. ನಗರದಲ್ಲಿ ಚಳಿ ಹೆಚ್ಚಳವಾದ ಬೆನ್ನಲ್ಲಿಯೇ ಆಸ್ಪತ್ರೆಗಳಲ್ಲಿ ಸಾರಿ ಪ್ರಕರಣಗಳ ಸಂಖ್ಯೆ ಶೇ 10ರಷ್ಟು ಏರಿಕೆಯಾಗಿದೆ.

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಸಾರಿ ಪ್ರಕರಣಗಳಲ್ಲಿ ಸದ್ಯ ಶೇ 5ರಷ್ಟು ಮಂದಿ ಕೋವಿಡ್ ಪೀಡಿತರಾಗುತ್ತಿದ್ದಾರೆ. ಕಳೆದ ಜುಲೈನಲ್ಲಿ ಸಾರಿ ಪ್ರಕರಣಗಳು ಹೆಚ್ಚಳವಾಗಿದ್ದರಿಂದ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ತಲೆದೋರಿತ್ತು. ಈಗ ಮತ್ತೆ ಏರಿಕೆ ಕಾಣುತ್ತಿರುವುದರಿಂದ ಆಸ್ಪತ್ರೆಗಳು ಹೆಚ್ಚುವರಿ ಹಾಸಿಗೆಗಳನ್ನು ಸಿದ್ಧತೆ ಮಾಡಿಕೊಳ್ಳಲಾರಂಭಿಸಿವೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ‘ಜನವರಿ ಅಥವಾ ಫೆಬ್ರುವರಿಯಲ್ಲಿ ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡು, ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ’ ಎಂದು ಈ ಹಿಂದೆ ಸರ್ಕಾರಕ್ಕೆ ಎಚ್ಚರಿಸಿತ್ತು.

ADVERTISEMENT

ಹವಾಮಾನ ವೈಪರೀತ್ಯ: ಒಂದು ತಿಂಗಳಿಂದ ನಗರದಲ್ಲಿ ಸರಾಸರಿ 19 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗುತ್ತಿದೆ. ಮಧ್ಯಾಹ್ನದಿಂದ ಶೀತಗಾಳಿ ಹಾಗೂ ಸಂಜೆಯ ಬಳಿಕ ಚಳಿ ಕಾಣಿಸಿಕೊಳ್ಳುತ್ತಿದೆ. ಬೆಳಿಗ್ಗೆ ದಟ್ಟವಾಗಿ ಮಂಜು ಆವರಿಸಿಕೊಳ್ಳುತ್ತಿದೆ. ಇದು ವೃದ್ಧರು ಹಾಗೂ ವಿವಿಧ ಕಾಯಿಲೆ ಎದುರಿಸುತ್ತಿರುವವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳಲು ಕಾರಣವಾಗಿದೆ ಎನ್ನುತ್ತಾರೆ ವೈದ್ಯರು.

ಸಾರಿ ಸಮಸ್ಯೆಗೆ ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ 32 ಮಂದಿ ದಾಖಲಾಗಿದ್ದಾರೆ. ಬೌರಿಂಗ್, ಕೆ.ಸಿ. ಜನರಲ್ ಸೇರಿದಂತೆ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ 20ಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಣಿಪಾಲ್, ಫೋರ್ಟಿಸ್, ಕೊಲಂಬಿಯಾ ಏಷ್ಯಾ, ನಾರಾಯಣ ಹೆಲ್ತ್, ವಿಕ್ರಮ್ ಸೇರಿದಂತೆ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಸಾರಿ ಸಮಸ್ಯೆಗೆ ಪ್ರತಿನಿತ್ಯ ಸರಾಸರಿ 3ರಿಂದ 4 ಮಂದಿ ದಾಖಲಾಗುತ್ತಿದ್ದಾರೆ.

‘ಚಳಿ ಹಾಗೂ ವಾತಾವರಣದಲ್ಲಿನ ವೈಪರೀತ್ಯದಿಂದ ಉಸಿರಾಟದ ಸಮಸ್ಯೆಗಳು ಕಾಡಲಾರಂಭಿಸಿದೆ. ಈ ಅವಧಿಯಲ್ಲಿ ವಯಸ್ಸಾದವರು ಹೊರಗಡೆ ಪ್ರಯಾಣ ಕಡಿಮೆ ಮಾಡಿ, ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಕೋವಿಡ್‌ ಬಗ್ಗೆ ಆತಂಕಪಡಬೇಕಾಗಿಲ್ಲ’ ಎಂದು ಬೆಂಗಳೂರು ನಗರ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅನ್ಸರ್ ಅಹಮದ್ ತಿಳಿಸಿದರು.

ಐಸಿಯು ದಾಖಲಾತಿ ಹೆಚ್ಚಳ

ತೀವ್ರ ಉಸಿರಾಟದ ಸಮಸ್ಯೆ ಸಂಬಂಧ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗುವವರ ಸಂಖ್ಯೆಯಲ್ಲಿ ಶೇ 15ರಷ್ಟು ಹೆಚ್ಚಳವಾಗಿದೆ. ಈ ಮಾದರಿಯ ಸಮಸ್ಯೆ ಎದುರಿಸುತ್ತಿರುವವರಿಗೆ ಕೋವಿಡ್ ಆರ್‌ಟಿ–ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಐಸಿಯುಗೆ ದಾಖಲಾದ ಕೋವಿಡ್ ಪೀಡಿತರ ಸಂಖ್ಯೆಯೂ ಏರಿಕೆ ಕಂಡಿದೆ. ಕಳೆದ ಜ.1ರ ವೇಳೆ 82 ಮಂದಿ ಐಸಿಯುವಿನಲ್ಲಿ ಇದ್ದರು. ಈಗ ಆ ಸಂಖ್ಯೆ 89ಕ್ಕೆ ತಲುಪಿದೆ.

‘ಕಳೆದ ವರ್ಷದ ಚಳಿಗಾಲಕ್ಕೆ ಹೋಲಿಸಿದಲ್ಲಿ ಈ ಬಾರಿ ತೀವ್ರ ಉಸಿರಾಟದ ಸಮಸ್ಯೆ ಸಂಬಂಧ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ. ಸಾರಿ ಸಮಸ್ಯೆಗೆ ಮೀಸಲಿರಿಸಲಾಗಿದ್ದ ಎಲ್ಲ 20 ಐಸಿಯು ಹಾಸಿಗೆಗಳೂ ಭರ್ತಿಯಾಗಿವೆ’ ಎಂದು ಮಣಿಪಾಲ್ ಆಸ್ಪತ್ರೆಯ ಕ್ರಿಟಿಕಲ್ ಕೇರ್ ವಿಭಾಗದ ಡಾ ಸುನೀಲ್ ಕಾರಂತ್ ತಿಳಿಸಿದರು.

* ಸಾರಿ ಸಮಸ್ಯೆಯ ಸಂಬಂಧ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಸ್ವಲ್ಪ ಏರಿಕೆಯಾಗಿದೆ. ಅವರಿಗೆ ಆರ್‌ಟಿ–ಪಿಸಿಆರ್ ಪರೀಕ್ಷೆ ನಡೆಸಲಾಗುತ್ತಿದೆ.

-ಡಾ.ಸಿ. ನಾಗರಾಜ್, ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.