ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 2024-25 ಹಣಕಾಸು ವರ್ಷದಲ್ಲಿ 4.10 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಈ ವಿಮಾನ ನಿಲ್ದಾಣದಿಂದ ಐದು ಲಕ್ಷ ಟನ್ ಸರಕು ಸಾಗಣೆ ಮಾಡಲಾಗಿದೆ.
ದೇಶೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ10ರಷ್ಟು ಏರಿಕೆಯಾಗುವ ಮೂಲಕ 3.60 ಕೋಟಿ ತಲುಪಿದೆ. ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 25ರಷ್ಟು ಹೆಚ್ಚಳವಾಗುವ ಮೂಲಕ 50.83 ಲಕ್ಷ ತಲುಪಿದೆ.
2023–24ರಲ್ಲಿ 3.75 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದರು. ಅದಕ್ಕೆ ಹೋಲಿಸಿದರೆ 2024-25 ಹಣಕಾಸು ವರ್ಷದಲ್ಲಿ ಪ್ರಯಾಣಿಕರ ಸಂಖ್ಯೆ ಶೇ 11.6ರಷ್ಟು ಹೆಚ್ಚಳವಾಗಿದೆ.
ಈ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದ್ದು, ಪ್ರಯಾಣಿಕರ ಸಂಚಾರ ಮತ್ತು ಸರಕು ಸಾಗಣೆಯಲ್ಲಿ ಮೈಲುಗಲ್ಲು ಸೃಷ್ಟಿಸಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.
ನಾಲ್ಕು ತಿಂಗಳಲ್ಲಿ ಅಂತರ ರಾಷ್ಟ್ರೀಯ ಪ್ರಯಾಣಿಕರ ಪ್ರಯಾಣ ಸಂಖ್ಯೆಯಲ್ಲಿ ಭಾರತದ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಇಂಡಿಗೊ ವಿಮಾನಯಾನ ಸಂಸ್ಥೆ ಜಾಗತಿಕವಾಗಿ ಜಾಲ ವಿಸ್ತರಿಸಿರುವುದು, ಲಂಡನ್‌ನ ಹೀಥ್ರೊಗೆ ದೈನಂದಿನ ಹೆಚ್ಚುವರಿ ವಿಮಾನ ಹಾರಾಟ ಆರಂಭ ಆಗಿರುವುದು ಅಂತರರಾಷ್ಟ್ರೀಯ ಪ್ರಯಾ ಣಿಕರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
ಕ್ಯಾಥೆ ಪೆಸಿಫಿಕ್, ಕೆಎಲ್ಎಂ, ಜಪಾನ್ ಏರ್‌ಲೈನ್ಸ್, ಕ್ವಾಂಟಾಸ್ ಸೇರಿ ಹಲವು ವಿದೇಶಿ ವಿಮಾನಯಾನ ಸಂಸ್ಥೆ ಗಳ ವಿಮಾನ ಸಂಚಾರ ಪ್ರಮಾಣ ಹೆಚ್ಚಳ ವಾಗಿರುವುದು ಅಂತರ ರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಮಾವು, ಕೊತ್ತಂಬರಿ ರಫ್ತಿನಲ್ಲಿ ಮುಂಚೂಣಿ
ಬೆಂಗಳೂರು ವಿಮಾನ ನಿಲ್ದಾಣವು ಮಾವು ಮತ್ತು ಕೊತ್ತಂಬರಿ ಸೊಪ್ಪು ರಫ್ತಿನಲ್ಲಿ ಮುಂಚೂಣಿಯಲ್ಲಿದೆ.
ಸಿದ್ಧ ಉಡುಪು, ಔಷಧ ಮತ್ತು ಯಂತ್ರೋಪಕರಣ, ಬಿಡಿ ಭಾಗಗಳ ಸಾಗಣೆ ಹೆಚ್ಚಳವಾಗಿದೆ. ಸರಕು ಸಾಗಣೆಗೆ ಮೀಸಲಾದ 12 ವಿಮಾನಯಾನ ಸಂಸ್ಥೆಗಳು ಬೆಂಗಳೂರಿನಿಂದ ಸಿಂಗಾಪುರ, ಲಂಡನ್, ಫ್ರಾಂಕ್‌ಫರ್ಟ್, ಷಿಕಾಗೊ ಮತ್ತು ಮಸ್ಕತ್‌ನಂತಹ ಪ್ರಮುಖ ರಫ್ತು ಕೇಂದ್ರಿತ ನಗರಗಳನ್ನು ಸಂಪರ್ಕಿಸುತ್ತದೆ.
ಸಿಂಗಾಪುರ, ಶಾಂಘೈ, ಹಾಂಗ್‌ಕಾಂಗ್ ಮತ್ತು ಫ್ರಾಂಕ್‌ಫರ್ಟ್ ನಗರಗಳು ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಸರಕುಗಳು ಆಮದಾಗುವ ಪ್ರಮುಖ ತಾಣಗಳಾಗಿವೆ.
ಹನೋಯಿಗೆ ನೇರ ವಿಮಾನ
33 ಅಂತರರಾಷ್ಟ್ರೀಯ ನಿಲ್ದಾಣ ಗಳಿಗೆ ಬೆಂಗಳೂರಿನಿಂದ ತಡೆ ರಹಿತ ವಿಮಾನ ಸಂಚರಿಸುತ್ತವೆ. ಇದೇ ಮೇ ತಿಂಗಳಿನಿಂದ ವಿಯೆಟ್ನಾಂ ರಾಜಧಾನಿ ಹನೋಯಿಗೆ ನೇರ ವಿಮಾನ ಸಂಚಾರ ಆರಂಭವಾಗಲಿದೆ.
ಅದರೊಂದಿಗೆ 34ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ತಡೆರಹಿತ ವಿಮಾನ ಸಂಚಾರ ಆರಂಭವಾದಂತಾಗುತ್ತದೆ.
ವಿದೇಶಗಳಿಗೆ ಹೆಚ್ಚು ರಫ್ತು
ಸರಕು ಸಾಗಣೆಯಲ್ಲಿಯೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದಾಖಲೆ ನಿರ್ಮಿಸಿದೆ. ಇದೇ ಮೊದಲ ಬಾರಿಗೆ ಐದು ಲಕ್ಷ ಟನ್ ಗಿಂತ ಹೆಚ್ಚು ಸರಕು ಸಾಗಣೆ ಮೂಲಕ ಮಹತ್ವದ ಮೈಲುಗಲ್ಲು ಸಾಧಿಸಿದೆ.
2024-25 ಆರ್ಥಿಕ ವರ್ಷದಲ್ಲಿ ಒಟ್ಟು 5,02,480 ಟನ್ ಸರಕು ಸಾಗಣೆ ಮಾಡಲಾಗಿದ್ದು ಶೇ.14ರಷ್ಟು ಬೆಳವಣಿಗೆ ದಾಖಲಿಸಿದೆ. ಅಂತರರಾಷ್ಟ್ರೀಯ ಸರಕು ಸಾಗಣೆಯಲ್ಲಿ ಶೇ 21ರಷ್ಟು ಏರಿಕೆಯಾಗುವ ಮೂಲಕ 3.21 ಲಕ್ಷ ಟನ್ ಮತ್ತು ದೇಶೀಯ ಸರಕು ಸಾಗಣೆಯಲ್ಲಿ ಶೇ 4 ರಷ್ಟು ಏರಿಕೆ ಮೂಲಕ 1.81 ಲಕ್ಷ ಟನ್ ಸರಕು ಸಾಗಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.