ADVERTISEMENT

ಆರ್‌.ಆರ್. ನಗರ: ಕಾಂಗ್ರೆಸ್‌ನಲ್ಲಿ ಹೆಚ್ಚುತ್ತಿದೆ ಆಕಾಂಕ್ಷಿಗಳ ಪಟ್ಟಿ

ಸಂಸದ ಡಿ.ಕೆ.ಸುರೇಶ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 2:37 IST
Last Updated 2 ಅಕ್ಟೋಬರ್ 2020, 2:37 IST
ಡಿ.ಕೆ. ಸುರೇಶ್‌
ಡಿ.ಕೆ. ಸುರೇಶ್‌   

ಬೆಂಗಳೂರು: ‘ಯಾರೇ ಅಭ್ಯರ್ಥಿಯಾದರೂ ಕೆಲಸ ಮಾಡುತ್ತೇವೆಂದು ಆರ್‌.ಆರ್‌. ನಗರ ಕ್ಷೇತ್ರದ ಕಾರ್ಯಕರ್ತರು ಹೇಳಿದ್ದಾರೆ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗುವವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡುತ್ತೇವೆ’ ಎಂದು ಸಂಸದ ಡಿ.ಕೆ. ಸುರೇಶ್‌ ಹೇಳಿದರು.

ಕಾಂಗ್ರೆಸ್‌ ಭವನದಲ್ಲಿ ಸ್ಥಳೀಯ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಮಾತನಾಡಿದ ಅವರು, ‘ಮಾಗಡಿ ಬಾಲಕೃಷ್ಣ, ರಕ್ಷಾ ರಾಮಯ್ಯ, ಕೃಷ್ಣಪ್ಪ ಹೀಗೆ ಅನೇಕರ ಹೆಸರು ಬಂದಿವೆ. ಕುಸುಮಾ ರವಿ‌ ಹೆಸರು ಕೂಡಾ ಪ್ರಸ್ತಾಪವಾಗಿದೆ’ ಎಂದರು.

‘ಪಕ್ಷಕ್ಕೆ ಪ್ರತಿ ಬೂತ್‌ನಲ್ಲಿ ಕಾರ್ಯಕರ್ತರು ಇದ್ದಾರೆ. ಚುನಾವಣಾ ಜವಾಬ್ದಾರಿಯನ್ನು ನಾನು ಹೊತ್ತುಕೊಳ್ಳುತ್ತೇನೆ. ಕೆಲವು ಸಮಸ್ಯೆ, ಬೆದರಿಕೆ, ಆಸೆ, ಅಮಿಷಗಳ ಬಗ್ಗೆ ಕಾರ್ಯಕರ್ತರು ನನ್ನ‌ ಗಮನಕ್ಕೆ ತಂದಿದ್ದಾರೆ’ ಎಂದು ಹೇಳಿದರು.

ADVERTISEMENT

‘ಮುನಿರತ್ನ ಅವರಿಗೆ ಬಿಜೆಪಿ ಟಿಕೆಟ್ ಸಿಗುವುದಿಲ್ಲವೆಂದು ಆ ಪಕ್ಷದ ಕಾರ್ಯಕರ್ತರೇ ಹೇಳುತ್ತಿದ್ದಾರೆ. ಮುನಿರತ್ನ ನನಗೆ ಒಳ್ಳೆಯ ಸ್ನೇಹಿತ. ಆದರೆ, ರಾಜಕೀಯವಾಗಿ ಮಾತ್ರ ಶತ್ರು’ ಎಂದು ತಿಳಿಸಿದರು.

ಅದಕ್ಕೂ ಮೊದಲು ಸಭೆಯಲ್ಲಿ ಮಾತನಾಡಿದ ಸುರೇಶ್‌, ‘ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿವೆ. ಆ ಸಮಸ್ಯೆಗಳನ್ನು ಸರ್ಕಾರ ಪರಿಹರಿಸುತ್ತಿಲ್ಲ. ಉಪ ಚುನಾವಣೆಯಲ್ಲಿ ಬಿಜೆಪಿಯವರು ದಾರಿ ತಪ್ಪಿಸಬಹುದು. ನೀವು ‌ಬಹಳ ಹುಷಾರಾಗಿರಬೇಕು. ನಿಮ್ಮ‌ ಮೇಲೆ ದಬ್ಬಾಳಿಕೆ ಮಾಡಬಹುದು. ಅಂಥ ಸಂದರ್ಭದಲ್ಲಿ ನಮ್ಮ‌ ಗಮನಕ್ಕೆ ತನ್ನಿ. ದಬ್ಬಾಳಿಕೆ ಮಾಡುವವರ ಮನೆ ಮುಂದೆ ಧರಣಿ ಮಾಡಿ. ನಿಮ್ಮನ್ನು ಹೆದರಿಸುವ ಕೆಲಸವೂ ಆಗಬಹುದು. ಯಾವುದಕ್ಕೂ ಅಂಜಬೇಡಿ’ ಎಂದು ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬಿದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.