
ಯಲಹಂಕ: ಅನ್ವೇಷಣಾ ಕಾಯ್ದೆಯಡಿ ರಾಜ್ಯದಲ್ಲಿ ಹೊಸ ತಂತ್ರಜ್ಞಾನಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ಪೂರಕವಾಗುವಂತೆ ನಿಯಂತ್ರಣಾತ್ಮಕ ಪ್ರಯೋಗಾತ್ಮಕ ವೇದಿಕೆಯನ್ನು (ರೆಗ್ಯುಲೇಟರಿ ಸ್ಯಾಂಡ್‌ಬಾಕ್ಸ್) ರೂಪಿಸುವ ಗುರಿ ಹೊಂದಲಾಗಿದೆ ಎಂದು ಐಟಿ–ಬಿಟಿ ಇಲಾಖೆಯ ಕಾರ್ಯದರ್ಶಿ ಎನ್. ಮಂಜುಳಾ ತಿಳಿಸಿದರು.
ಥಣಿಸಂದ್ರ ಮುಖ್ಯರಸ್ತೆಯ ಭಾರತೀಯ ಸಿಟಿಯಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ(ಐಎಎಂಎಐ) ಆಯೋಜಿಸಿರುವ 20ನೇ ಆವೃತ್ತಿಯ ‘ಇಂಡಿಯಾ ಡಿಜಿಟಲ್ ಶೃಂಗಸಭೆ’ಯನ್ನು (ಐಡಿಎಸ್-2026) ಉದ್ಘಾಟಿಸಿ ಅವರು ಮಾತನಾಡಿದರು.
‘ಕಡಿಮೆ ನಿಯಂತ್ರಣಗಳಿರುವ ಮುಕ್ತ ವಾತಾವರಣದಲ್ಲಿ ವಿವಿಧ ತಂತ್ರಜ್ಞಾನಗಳನ್ನು ಪರೀಕ್ಷಿಸಲು ಹಾಗೂ ಅಭಿವೃದ್ಧಿಪಡಿಸಲು ‘ರೆಗ್ಯುಲೇಟರಿ ಸ್ಯಾಂಡ್‌ಬಾಕ್ಸ್’ ನೆರವಾಗಲಿದೆ’ ಎಂದರು.
‘ದೇಶದಲ್ಲಿ ಎಐ ಸಾಮರ್ಥ್ಯದ ಪ್ರಮುಖ ಕೇಂದ್ರವಾಗಿ ರಾಜ್ಯ ಹೊರಹೊಮ್ಮಿದೆ. ಸರ್ಕಾರ ಪ್ರಾಯೋಜಿತ ಉತ್ಕೃಷ್ಟತಾ ಕೇಂದ್ರಗಳು ಹಾಗೂ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳು, ಎಐ ಪ್ರತಿಭೆಗಳ ಸಾಂದ್ರತೆ ಮತ್ತು ಬಲಿಷ್ಠ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಗಳಿಂದಾಗಿ ಕರ್ನಾಟಕವು ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ’ ಎಂದು ಹೇಳಿದರು.
ಐಎಎಂಎಐ ಅಧ್ಯಕ್ಷ ಹಾಗೂ ಬಿಲ್‌ಡೆಸ್ಕ್ ಸಹ-ಸಂಸ್ಥಾಪಕ ಶ್ರೀನಿವಾಸು ಮಾತನಾಡಿ, ‘ಡಿಜಿಟಲ್ ತಂತ್ರಜ್ಞಾನವು ಬ್ಯಾಂಕಿಂಗ್, ಪಾವತಿ, ವಾಣಿಜ್ಯ, ಸಾರಿಗೆ, ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ದೇಶದ ಆರ್ಥಿಕ ಬೆಳವಣಿಗೆಯ ಬುನಾದಿಯಾಗಿದೆ. ಎಐ ಅನ್ನು ಜವಾಬ್ದಾರಿಯುತವಾಗಿ ಹಾಗೂ ಪಾರದರ್ಶಕವಾಗಿ ಅಳವಡಿಸುವುದೇ ಇಂದಿನ ಪ್ರಮುಖ ಸವಾಲು’ ಎಂದು ಅಭಿಪ್ರಾಯಪಟ್ಟರು.
ಐಎಎಂಎಐ ಅಧ್ಯಕ್ಷ ಡಾ.ಸುಭೋ ರೇ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಐಡಿಎಸ್-2026ನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ‘ಮೇಕ್ ಇನ್ ಇಂಡಿಯಾ’ ಸಹಯೋಗದೊಂದಿಗೆ ಆಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.